ಪಾಲ್ಘರ್ (ಮಹಾರಾಷ್ಟ್ರ): ಇಲ್ಲಿನ ವಿರಾರ್ನಲ್ಲಿ ಸಂಭವಿಸಿದ ಕಟ್ಟಡ ಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಬುಧವಾರ ಕಟ್ಟಡ ಕುಸಿದಿದ್ದು, ಕಳೆದೆರಡು ದಿನಗಳಿಂದ ಸಾಗುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಮತ್ತೆ ಮೂರು ಮೃತದೇಹಗಳನ್ನು ಹೊರ ತೆಗೆಯಲಾಗಿದೆ.
ವಿರಾರ್ ಪ್ರದೇಶದ ವಿಜಯ್ ನಗರದಲ್ಲಿ 50 ಫ್ಲಾಟ್ಗಳಿರುವ ನಾಲ್ಕು ಅಂತಸ್ತಿನ ಕಟ್ಟಡವೊಂದು ಬುಧವಾರ ಬೆಳಗಿನ ಜಾವ 12.05ರ ವೇಳೆಗೆ ಪಕ್ಕದ ಖಾಲಿ ಮನೆಯ ಮೇಲೆ ಕುಸಿದು ಬಿದ್ದಿತ್ತು. ಕಟ್ಟಡದ ನಾಲ್ಕನೇ ಅಂತಸ್ತಿನಲ್ಲಿ 12 ಫ್ಲಾಟ್ ಇದ್ದು, ಅದರಲ್ಲಿ ಒಂದು ಮನೆಯಲ್ಲಿ ಒಂದು ವರ್ಷದ ಮಗುವಿನ ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿತ್ತು. ಅದರ ಒಂದು ಬದಿಯು ಕುಸಿದಿದ್ದು, ನಿವಾಸಿಗಳು ಹಾಗೂ ಹುಟ್ಟುಹಬ್ಬಕ್ಕೆ ಆಗಮಿಸಿದ್ದ ಅತಿಥಿಗಳು ಅವಶೇಷಗಳ ಅಡಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.