ಭಾರತ ಪ್ರವೇಶಿಸಿದ ಮೂವರು ಪಾಕಿಸ್ತಾನಿ ಭಯೋತ್ಪಾದಕರು: ಬಿಹಾರದಲ್ಲಿ ಹೈ ಅಲರ್ಟ್

Ravi Talawar
ಭಾರತ ಪ್ರವೇಶಿಸಿದ ಮೂವರು ಪಾಕಿಸ್ತಾನಿ ಭಯೋತ್ಪಾದಕರು: ಬಿಹಾರದಲ್ಲಿ ಹೈ ಅಲರ್ಟ್
WhatsApp Group Join Now
Telegram Group Join Now

ಪಾಟ್ನಾ (ಬಿಹಾರ): ಕಳೆದ ವಾರ ನೇಪಾಳದ ಮೂಲಕ ಮೂವರು ಪಾಕಿಸ್ತಾನಿ ಭಯೋತ್ಪಾದಕರು ರಾಜ್ಯಕ್ಕೆ ಪ್ರವೇಶಿಸಿದ್ದಾರೆ ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಬಿಹಾರ ಪೊಲೀಸ್ ಪ್ರಧಾನ ಕಚೇರಿಯು ಗುರುವಾರ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮತದಾರರ ಅಧಿಕಾರ ಯಾತ್ರೆ ನಡೆಯುತ್ತಿರುವ ನಡುವೆಯೇ ಈ ಎಚ್ಚರಿಕೆ ಬಂದಿದ್ದು, ರಾಜ್ಯದಲ್ಲಿ ಭದ್ರತಾ ಕಳವಳ ಮೂಡಿಸಿದೆ.

ಉಗ್ರರು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಗೆ ಸೇರಿದವರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅವರನ್ನು ರಾವಲ್ಪಿಂಡಿ ನಿವಾಸಿ ಹಸ್ನಾನಿನ್ ಅಲಿ, ಉಮರ್ಕೋಟ್‌ನ ಆದಿಲ್ ಹುಸೇನ್ ಮತ್ತು ಭವಾಲ್ಪುರದ ಮೊಹಮ್ಮದ್ ಉಸ್ಮಾನ್ ಎಂದು ಗುರುತಿಸಲಾಗಿದೆ. ಈ ಮೂವರು ಆಗಸ್ಟ್ ಎರಡನೇ ವಾರದಲ್ಲಿ ನೇಪಾಳದ ಕಠ್ಮಂಡುವಿಗೆ ಆಗಮಿಸಿ, ಕಳೆದ ವಾರ ಬಿಹಾರದ ಗಡಿಯನ್ನು ದಾಟಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಗಡಿ ಜಿಲ್ಲೆಗಳಿಗೆ ವಿಶೇಷ ಸೂಚನೆ: ಸರ್ದಾರ್ ಪಟೇಲ್ ಭವನದಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯು ಉಗ್ರರ ಪಾಸ್‌ಪೋರ್ಟ್ ವಿವರಗಳನ್ನು ಗಡಿ ಜಿಲ್ಲೆಗಳಲ್ಲಿರುವ ಭದ್ರತಾ ಸಂಸ್ಥೆಗಳು ಮತ್ತು ಪೊಲೀಸ್ ಪಡೆಗಳಿಗೆ ರವಾನಿಸಿದೆ. ಭಾರತ-ನೇಪಾಳ ಗಡಿಯನ್ನು ಹಂಚಿಕೊಳ್ಳುವ ಪ್ರದೇಶಗಳಾದ ಸೀತಾಮರ್ಹಿ, ಮಧುಬನಿ, ಪಶ್ಚಿಮ ಚಂಪಾರಣ್, ಅರಾರಿಯಾ, ಕಿಶನ್‌ಗಂಜ್ ಮತ್ತು ಸುಪಾಲ್ ಸೇರಿದಂತೆ ಜಿಲ್ಲೆಗಳಿಗೆ ವಿಶೇಷ ಸೂಚನೆಗಳನ್ನು ನೀಡಲಾಗಿದೆ.

ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ಹೋಟೆಲ್‌ಗಳು ಮತ್ತು ಇತರ ಜನದಟ್ಟಣೆ ಇರುವ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಶಸ್ತ್ರ ಗಡಿ ಪಡೆಯ (ಎಸ್‌ಎಸ್‌ಬಿ) ಯೋಧರನ್ನು ಕಟ್ಟೆಚ್ಚರ ವಹಿಸಲು ನಿಯೋಜನೆ ಮಾಡಲಾಗಿದೆ. ವಿಮಾನ ನಿಲ್ದಾಣ ಮತ್ತು ರೈಲ್ವೆ ಭದ್ರತಾ ಸಂಸ್ಥೆಗಳು ಜಾಗರೂಕತೆಯನ್ನು ಹೆಚ್ಚಿಸಿವೆ. ಗುಪ್ತಚರ ಘಟಕಗಳು ಸ್ಥಳೀಯ ಮಟ್ಟದಲ್ಲಿ ಅನುಮಾನಾಸ್ಪದ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಸುಲಭ ಚಲನೆ ಹಿನ್ನೆಲೆಯ್ಲಿ ಬಿಹಾರ-ನೇಪಾಳ ಗಡಿಯ ಮೂಲಕ ಭಯೋತ್ಪಾದಕರು ಒಳನುಸುಳುವಿಕೆಯು ಇದೇ ಮೊದಲೇನಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article