ಬಳ್ಳಾರಿ ಆ 27: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗಗಳನ್ನು ಪಡೆದುಕೊಳ್ಳಬೇಕಾದಲ್ಲಿ ಉತ್ತಮವಾದ ಕೌಶಲ್ಯವನ್ನು ಪಡೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಆರ್ ವೈ ಎಂ ಸಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಾನೆ ಕುಂಟೆ ಬಸವರಾಜ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ನಗರದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯ ಆರ್.ವೈ.ಎಂ.ಇ.ಸಿ. ಸಂಸ್ಥೆಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸೆಮಿನಾರ್ ಹಾಲ್‌ನಲ್ಲಿ ಕಾಲೇಜಿನ ಉದ್ಯಮಶೀಲತೆ ಅಭಿವೃದ್ಧಿ ಕೋಶ (EDC) ಮತ್ತು ಭಾರತಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ (MSME) – ಅಭಿವೃದ್ಧಿ ಮತ್ತು ಅನುಕೂಲ ಕಚೇರಿ, ಹುಬ್ಬಳ್ಳಿ ಇವರ ಸಹಯೋಗದಲ್ಲಿ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಎಂಎಸ್ಎಂಇ, ಡಿಎಫ್ಒ, ಹುಬ್ಬಳ್ಳಿಯ ಸಹಾಯಕ ನಿರ್ದೇಶಕರಾದ ಕಿರಣ್ ಕುಮಾರ್.ಡಿ ಅವರು ಸರ್ಕಾರದ ವಿವಿಧ ಉದ್ಯಮಶೀಲತಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕರ್ನಾಟಕ ಗ್ರಾಮೀಣ ಬ್ಯಾಂಕ್ (ಕೆ.ಜಿ.ಬಿ), ಬಳ್ಳಾರಿಯ ಮುಖ್ಯ ವ್ಯವಸ್ಥಾಪಕರಾದ ಚಂದನ್ ಸಿಂಗ್ ಅವರು ಉದ್ಯಮ ಪ್ರಾರಂಭಿಸಲು ಬ್ಯಾಂಕ್ ನೆರವು ಮತ್ತು ಹಣಕಾಸು ನಿರ್ವಹಣೆಯ ಬಗ್ಗೆ ಉಪಯುಕ್ತ ಸಲಹೆಗಳನ್ನು ನೀಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರ (ಡಿಐಸಿ), ಬಳ್ಳಾರಿಯ ಜಂಟಿ ನಿರ್ದೇಶಕ ಸೋಮಶೇಖರ್ ಅವರು ಜಿಲ್ಲಾ ಕೈಗಾರಿಕಾ ಕೇಂದ್ರಗಳ ಮೂಲಕ ಲಭ್ಯ ವಿರುವ ಸಂಪನ್ಮೂಲಗಳ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ. ಹನುಮಂತರೆಡ್ಡಿ ಮತ್ತು ಉಪಪ್ರಾಂಶುಪಾಲರಾದ ಡಾ. ಸವಿತಾ ಸೋನೋಳಿ ಆರ್.ವೈ.ಎಂ.ಇ.ಸಿ. ಆಡಳಿತ ಮಂಡಳಿ ಸದಸ್ಯರಾದ ಬಾಡದಪ್ರಕಾಶ್, ಪ್ರಭು ಸ್ವಾಮಿ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಕೋರಿ ನಾಗರಾಜ್, ಎಂಪಿಎಂ ಪಿಜಿ ಕೋ-ಆರ್ಡಿನೇಟರ್, ಡಾ. ತೋಟಪ್ಪ, ಡಾ.ಕೊಂಡೇಕಲ್ ಮಂಜುನಾಥ, ಪ್ರೊ.ಚಂದ್ರಶೇಖರ ಹಿರೇಗೌಡರ್, ಡಾ.ಕೊಟ್ರೇಶ್ ಸರ್ದಾರ, ಡಾ.ಎಸ್.ಪಿ. ಜಗದೀಶ, ಡಾ. ವಿರುಪಾಕ್ಷಗೌಡ, ಪ್ರೊ. ಎನ್. ಸ್ವಾಮಿ, ಡಾ. ವಡ್ಡಿನ ಚೇತನ್, ಪ್ರೊ.ಲಕ್ಷ್ಮಣ್ ನಾಯಕ್ ಸೇರಿದಂತೆ ಇತರ ಅಧ್ಯಾಪಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.