ಬೆಳಗಾವಿ: ಕಾಂಗ್ರೆಸ್ ಸರ್ಕಾರ ಎಷ್ಟೇ ಮಹತ್ವದ ಕೆಲಸಗಳನ್ನು ಮಾಡಿದರೂ ಬಿಜೆಪಿಯರು ವಿರೋಧಿಸುವುದು ಸ್ವಾಭಾವಿಕ. ಇನ್ನೂ ಎರಡೂವರೇ ವರ್ಷಗಳ ಕಾಲ ಆರೋಪ, ವಿರೋಧಿಸುವುದು ಬಿಟ್ಟರೆ ಬಿಜೆಪಿಯವರಿಗೆ ಬೇರೆ ಯಾವುದೇ ಕೆಲಸವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ನಗರದ ಕಾಂಗ್ರೆಸ್ ಭವದನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರು ಹೋರಾಟಗಾರ್ತಿ. ಇವರು ನಾಡಹಬ್ಬ ದಸರಾ ಉದ್ಘಾಟನೆ ಮಾಡುತ್ತಿರುವುದು ಒಳ್ಳೆಯ ವಿಚಾರ. ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ದಸರಾ ಉದ್ಘಾಟನೆಗೆ ಸರ್ಕಾರ ಆಹ್ವಾನ ನೀಡಿದೆ. ಆದರೆ ಇದರಲ್ಲಿ ರಾಜಕಾರಣ ಅಥವಾ ಧರ್ಮ ಬೆರಸುವುದು ಸರಿಯಲ್ಲ ಎಂದು ಬಿಜೆಪಿಯವರಿಗೆ ಟಾಂಗ್ ನೀಡಿದರು.
ಅನೇಕ ಜಿಲ್ಲೆಗಳಲ್ಲಿ ಗಣೇಶೋತ್ಸವ ನಿಮಿತ್ತ ಜಿಲ್ಲಾಡಳಿತದಿಂದ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಅದರಂತೆಯೇ ಭಕ್ತರಿಗಾಗಿ ಜಿಲ್ಲಾಧಿಕಾರಿ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ ಅಷ್ಟೇ, ಒಳ್ಳೆಯ ಕಾರ್ಯ ಮಾಡಬೇಕಾದರೆ ಯಾರಿಗೂ ಹೆದರುವ ಅಗತ್ಯವಿಲ್ಲ. ಗಣೇಶೋತ್ಸವಕ್ಕೆ ಬೇಕಾದ ತಯಾರಿ ಪಾಲಿಕೆಯಿಂದ ಮಾಡಬೇಕು. ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಗಣೇಶೋತ್ಸವಕ್ಕೆ ಸಹಕಾರ ನೀಡುತ್ತಾರೆ. ಪಾಲಿಕೆ ನಿಯಮಾನುಸಾರ ಉತ್ಸವ ನಡೆಯಲಿದೆ. ಯಾವುದೇ ಸಮಸ್ಯೆ ಆಗುವುದಿಲ್ಲ, ಪ್ರತಿ ವರ್ಷವೂ ಅಚ್ಚುಕಟ್ಟಾಗಿ ಬೆಳಗಾವಿಯಲ್ಲಿ ನಡೆಯುತ್ತದೆ ಎಂದರು.
ಕೋಟ್ಯಾಂತರ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಿದೆ. ವೈದ್ಯರ ನೇಮಕ ಸೇರಿದಂತೆ ಉಳಿದ ಕೆಲಸಗಳನ್ನು ಹಂತ-ಹಂತವಾಗಿ ಮಾಡಿ, ಸಾರ್ವಜನಕರಿಗೆ ಅನುಕೂಲ ಕಲ್ಪಿಸಲಾಗುವುದು. ಮುಂಬರುವ ತಿಂಗಳು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡವನ್ನು ಮುಖ್ಯಮುಂತ್ರಿ ಸಿದ್ದರಾಮಯ್ಯನವರ ಉದ್ಘಾಟಿಸಲಿದ್ದಾರೆ ಎಂದ ಸಚಿವರು, ಹೈಕೋರ್ಟ್ ಆದೇಶದಂತೆ ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ರಚಿಸಲಾಗಿದೆ. ಈ ಪ್ರಕರಣ ತನಿಖೆ ಹಂತದಲ್ಲಿ ಇದೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ಪಾತ್ರವಿಲ್ಲ ಎಂದು ತಿಳಿಸಿದರು.
ರೈತರ ಹಿತದೃಷ್ಟಿಯಿಂದ ಬಿಡಿಸಿಸಿ ಬ್ಯಾಂಕ್ ಹಾಗೂ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಎದುರಿಸುತ್ತಿದ್ದೇವೆ. ಹೊರತು ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಇನ್ನು ಗೋಕಾಕನಲ್ಲಿ ಇಂಜಿನಿಯರಿಂಗ್ ಕಾಲೇಜು ಪ್ರಾರಂಭವಾಗುವ ಮೂಲಕ ಗೋಕಾಕ ಸುತ್ತಲಿನ ಆರೈಳು ತಾಲೂಕಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಶೀಘ್ರವೇ ಸಿಬ್ಬಂದಿಗಳ ನೇಮಕವಾಗಲಿದ್ದು, ಇಂಜಿನಿಯರಿಂಗ್ ವಿಭಾಗದ ಮೂರು ವಿಷಯಗಳ ಕಲಿಕೆಗೆ ಸರ್ಕಾರ ಅನುಮತಿ ನೀಡಿದೆ. ಸೈಬರ್ ಸೆಕ್ರ್ಟರಿ, ಆರ್ಟಿಫಿಶಿಯಲ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಷಯ ಕಲಿಕೆ ಪ್ರಾರಂಭಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ್ ಹಣಮನ್ನವರ್, ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಬಸವರಾಜ ಸಿಗ್ಗಾಂವಿ, ಮುಖಂಡರಾದ ಸಿದ್ದಿಕಿ ಅಂಕಲಗಿ ಸೇರಿದಂತೆ ಹಲವರು ಇದ್ದರು.