ಗೋಕಾಕ: ಗೋಕಾಕನಲ್ಲಿ ಇಂಜಿನಿಯರಿಂಗ್ ಕಾಲೇಜು ಪ್ರಾರಂಭವಾಗುವ ಮೂಲಕ ಈ ಭಾಗದ ಜನರ, ವಿದ್ಯಾರ್ಥಿಗಳ ಬಹುದಿನಗಳ ಬೇಡಿಕೆ ಸಾಕಾರಗೊಂಡಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಗೋಕಾಕ ನಗರದ ಬ್ಯಾಳಿಕಾಟಾ ಹತ್ತಿರದ ಎನ್. ಎಸ್. ಎಫ್. ಆವರಣದಲ್ಲಿ ನೂತನವಾಗಿ ಪ್ರಾರಂಭಿಸಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಡಿಯಲ್ಲಿ ನೂನತ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ, ಪರಿಶೀಲಿಸಿ ಅವರು ಮಾತನಾಡಿದರು.
ಈ ನೂತನ ಇಂಜಿನಿಯರಿಂಗ್ ಕಾಲೇಜು ಪ್ರಾರಂಭದಿಂದ ಗೋಕಾಕ ಸುತ್ತಲಿನ ಆರೈಳು ತಾಲೂಕಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಶೀಘ್ರವೇ ಸಿಬ್ಬಂದಿಗಳ ನೇಮಕವಾಗಲಿದ್ದು, ಇಂಜಿನಿಯರಿಂಗ್ ವಿಭಾಗದ ಮೂರು ವಿಷಯಗಳ ಕಲಿಕೆಗೆ ಸರ್ಕಾರ ಅನುಮತಿ ನೀಡಿದೆ. ಸೈಬರ್ ಸೆಕ್ರ್ಟರಿ, ಆರ್ಟಿಫಿಶಿಯಲ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಷಯ ಕಲಿಕೆ ಪ್ರಾರಂಭಿಸಲಿದ್ದಾರೆ ಎಂದು ತಿಳಿಸಿದರು.
ಸತೀಶ್ ಶುಗರ್ಸ್ ಕಾಲೇಜಿನ ಕಟ್ಟಡದಲ್ಲೇ ಎರಡು ವರ್ಷಗಳ ಅವಧಿಗೆ ನೂತನ ಇಂಜಿನಿಯರಿಂಗ್ ಕಾಲೇಜು ಆರಂಭಕ್ಕೆ ಅನುಕೂಲ ಕಲ್ಪಿಸಿದ್ದೇವೆ. ಸ್ಥಳೀಯ ಶಾಸಕರು ಎಪಿಎಂಸಿ ಯಲ್ಲಿ ಸ್ಥಳ ನಿಯೋಜಿಸಿದರೆ ಲೋಕೋಪಯೋಗಿ ಇಲಾಖೆಯಿಂದ ಶಾಶ್ವತವಾಗಿ ನೂತನ ಕಟ್ಟಡ ನಿರ್ಮಿಸಲಾಗುವುದು ಎಂದರು.
ಗೋಕಾಕ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಸಂತೋಷ ದೇಶಪಾಂಡೆ ಮಾತನಾಡಿ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ಪ್ರಯತ್ನ, ಶೈಕ್ಷಣಿಕ ಕಾಳಜಿಯಿಂದ ಇಂದು ಗೋಕಾಕನಲ್ಲಿ ನೂತನ ಇಂಜಿನಿಯರಿಂಗ್ ಕಾಲೇಜು ಪ್ರಾರಂಭವಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರೆಯುತ್ತಿದೆ ಎಂದ ಅವರು, ಈ ನೂತನ ಕಾಲೇಜು ಬಗ್ಗೆ ಪ್ರಚಾರ ಮಾಡಬೇಕೆಂದು ಇದೇ ವೇಳೆ ವಿನಂತಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಿವೇಕ್ ಜತ್ತಿ, ಮಹೇಶ ಚಿಕ್ಕೋಡಿ ಸೇರಿದಂತೆ ಗೋಕಾಕ ಇಂಜಿನಿಯರಿಂಗ್ ಕಾಲೇಜಿನ ಸಿಬ್ಬಂದಿ ವರ್ಗದವರು ಇದ್ದರು.