ಧಾರವಾಡ: ಯುವ ಜನತೆ ಸಾಹಿತ್ಯದ ಕೃಷಿಯಲ್ಲಿ ತೊಡಗಿಕೊಳ್ಳುವದರಿಂದ ಸೃಜನಶೀಲತೆ ಹೆಚ್ಚಿಸಿಕೊಳ್ಳಲು ಸಹಾಯಕವಾಗಲಿದೆ ಎಂದು ಧಾರಾವಾಡ ಆಕಾಶವಾಣಿ ನಿವೃತ್ತ ನಿರ್ದೇಶಕ ಡಾ. ಬಸು ಬೇವಿನಗಿಡದ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಮತ್ತು ಪ್ರೊ. ಎಸ್. ಎಸ್. ಪಟಗುಂದಿ ಕುಟುಂಬ ಕರ್ನಾಟಕ ವಿದ್ಯಾವರ್ಧಕ ಸಂಘದ ಆಯೋಜಿಸಿದ ವೇದಾ ಸಿದ್ದಾರ್ಥ ಪಟುಗುಂದಿ ಅವರು ಬರೆದ “ದ ಜರ್ನಿ ಆಫ್ ಮೈ ಸ್ಕೂಲ್ ಲೈಫ್” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಪುಸ್ತಕವನ್ನು ಓದುವ ಬರೆಯುವ ಗುಣಮಟ್ಟ ಈಗಿನ ಕಾಲದಲ್ಲಿ ಕ್ಷೀಣಿಸುತ್ತಿದ್ದು, ವೇದಾ ಬರೆದಿರುವ ಪುಸ್ತಕವು ಅವಳ ಓದುವ ಬರೆಯುವ ಪ್ರತಿಭೆಯನ್ನು ಬಿಂಬಿಸುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಓದುವ ಬರೆಯುವ ಅಭಿರುಚಿಯನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದರು.
ಸಾಹಿತಿಗಳಾದ ಡಾ. ಮಲ್ಲಿಕಾರ್ಜುನ ಗುಮ್ಮಗೋಳ ಸಮಾಜದಲ್ಲಿ ಗಣ್ಯ ವ್ಯಕ್ತಿಗಳು ಅವರು ಅಧಿಕಾರದ ಸ್ಥಾನಮಾನಕ್ಕಿಂತಲೂ ಸಾಹಿತ್ಯಕ್ಕೆ ಅವರು ಕೊಟ್ಟ ಕೊಡುಗೆಯ ಮೇಲೆ ಸಮಾಜವು ಅವರನ್ನು ಗುರುತಿಸುತ್ತದೆ, ಸಮಾಜದಲ್ಲಿ ಅಧಿಕಾರಕ್ಕಿಂತ ಜ್ಞಾನಕ್ಕೆ ಹೆಚ್ಚಿನ ಮಹತ್ವ ಇರುತ್ತದೆ ಎಂದ ಅವರು ವೇದಾವಪುಸ್ತಕ ಬರೆದಿರುವ ಪ್ರತಿಭೆಯನ್ನು ನಾವೆಲ್ಲರು ಪ್ರೋತ್ಸಾಹಿಸಿ ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಆಸಕ್ತಿಯನ್ನು ಬೆಳೆಸುವ ಅವಶ್ಯಕತೆ ಇದೆ ಎಂದರು.
ಹಿರಿಯ ಕೆಎಎಸ್ ಅಧಿಕಾರಿಗಳಾದ ಡಾ. ವಿಜಯಕುಮಾರ ತೊರಗಲ ಮಾತನಾಡಿ… ವೇದಾಳ ಪುಸ್ತಕವು ಸಣ್ಣ ಕಥೆಯ ರೂಪಕದಲ್ಲಿ ಬಂದರೂ ಸಹ ಅದು ಆಕೆಯ ೧೦ ವರ್ಷದ ಶಾಲೆಯ ಜೀವನದ ಅನುಭವ ಮತ್ತು ಮೌಲ್ಯಗಳನ್ನು ಸ್ಪಷ್ಟಪಡಿಸುತ್ತದೆ. ಇದೆಲ್ಲವೂ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಸೆಲೆಯಾಗುವ ಲಕ್ಷಣಗಳು ಪೂರ್ತಿಯಾಗಿ ತೋರುತ್ತಿವೆ ಎಂದು ಹೇಳಿದರು.
ಗಜಾನನ ಮಣ್ಣಿಕೇರಿಯವರು ವೇದಾಳ ಪ್ರತಿಭೆಯನ್ನು ನೋಡಿ ಡಾ. ಡಿ. ಸಿ. ಪಾವಟೆ ಮತ್ತು ಮಮದಾಪುರ ಮಾಸ್ತರ ಅವರ ಮಮದಾಪುರ ಗ್ರಾಮದ ಮಣ್ಣಿನಲ್ಲಿರುವ ಡಿ. ಎನ್. ಎ ಗುಣವು ವೇದಾಳಲ್ಲಿ ಕಂಡುಬರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಮಾತನಾಡಿ… ವೇದಾ ಈ ಪುಸ್ತಕ ಬರೆಯುವ ಮುಖಾಂತರ ತನ್ನಲ್ಲಿರುವ ಪ್ರತಿಭೆಯನ್ನು ಇಷ್ಟು ಚಿಕ್ಕ ವಯಸ್ಸಿನಲ್ಲಿ ಸ್ಪಷ್ಟವಾಗಿ ತೋರಿಸಿದ್ದಾಳೆ. ಇಂದಿನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವದರಿಂದ ಅವರ ಪ್ರತಿಭೆ ಗುರುತಿಸಲು ಸಾಧ್ಯ. ಈ ನಿಟ್ಟಿನಲ್ಲಿ ಬಾಲ ವಿಕಾಸ ಅಕಾಡೆಮಿಯು ವೇದಾ ಪಟಗುಂದಿಯವರಿಗಿದ್ದ ಪ್ರತಿಭೆಯನ್ನು ಪರಿಗಣಿಸಿ ಎಲ್ಲ ಮಕ್ಕಳಲ್ಲಿ ಸ್ಪೂರ್ತಿಯನ್ನುಂಟುಮಾಡಲು ವೇದಾಳೊಂದಿಗೆ ಸಂದರ್ಶನದ ಕಾರ್ಯಕ್ರಮವನ್ನು ರೂಪಿಸಿಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಂಕರ ಕುಂಬಿ, ಪ್ರೊ. ಸವಿತಾ ಸಿ. ಪಟಗುಂದ, ಕವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್, ಎಸ್. ಪಟಗುಂದಿ, ಡಾ.ಮಲ್ಲಿಕಾರ್ಜುನ ಗುಮ್ಮಗೋಳ ,ಗಜಾನನ ಮನ್ನಿಕೇರಿ, ಕೃತಿಕಾರ್ತಿ ವೇದಾ ಪಟಗುಂದಿ ಸೇರಿದಂತೆ ಪಟಗುಂದಿ ಕುಟುಂಬ ವರ್ಗದ ಸದಸ್ಯರು ಹಾಜರಿದ್ದರು.