ರಾಮದುರ್ಗ: ತಾಲೂಕಿನ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಾಕಷ್ಟು ಶ್ರಮ ಪಟ್ಟು ಹೆಸ್ಕಾಂ ವಿಭಾಗ ಕಚೇರಿಯನ್ನು ತೆರೆಯಲಾಗಿದೆ. ಅಲ್ಲದೇ ತಾಲೂಕಿನ ಸಾಕಷ್ಟು ಭಾಗಗಳಲ್ಲಿ ವಿದ್ಯುತ್ ವಿತರಣಾ ಉಪ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದ್ದು, ಇದರಿಂದ ರೈತರಿಗೆ ಆಗುವ ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ಪಟ್ಟಣದಲ್ಲಿ ರಾಮದುರ್ಗ ಹೆಸ್ಕಾಂ ವಿಭಾಗ ಹಾಗೂ ಉಪ ವಿಭಾಗ ಕಛೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಟಿಸಿ ಸುಟ್ಟಾಗ ರೈತರು ಅದನ್ನು ಪಡೆದುಕೊಳ್ಳಲು ಬೈಲಹೊಂಗಲಕ್ಕೆ ಅಲೆದಾಡಬೇಕಿತ್ತು. ಅದನ್ನು ತಪ್ಪಿಸುವ ಉದ್ದೇಶದಿಂದ ಸರಕಾರದ ಮಟ್ಟದಲ್ಲಿ ಶ್ರಮಪಟ್ಟು ಇಲ್ಲಿಯೇ ಕಚೇರಿ ನಿರ್ಮಿಸಲಾಗಿದೆ ಎಂದು ಹೇಳಿದರು.
ತಾಲೂಕಿನ ಜನತೆಗೆ ವಾಹನ ನೋಂದಣಿಗೆ ಹಾಗೂ ಡಿವೈಎಸ್ಪಿ ಕಚೇರಿಗೆ ಕೆಲಸಗಳಿಗೆ ಬೈಲಹೊಂಗಲಕ್ಕೆ ಹೋಗುತ್ತಿದ್ದರು. ಈ ಎಲ್ಲಾ ಕಚೇರಿಗಳನ್ನು ಪಟ್ಟಣದಲ್ಲಿ ತಂದು ಜನರಿಗೆ ಅನುಕೂಲ ಕಲ್ಪಿಸಿದರೆ ಅದರ ಬಗ್ಗೆ ಕೃತಜ್ಞತೆಯನ್ನು ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದೆ ತಾಲೂಕಿನಲ್ಲಿ ರೈತರು ವಿದ್ಯುತ್ ಸಮಸ್ಯೆ ಎದುರಿಸಬಾರದು ಎಂಬ ಉದ್ದೇಶದಿಂದ ಬಟಕುರ್ಕಿ, ಸುರೇಬಾನ, ಹುಲಕುಂದ ಗ್ರಾಮದಲ್ಲಿರುವ ೩೩ ಕೆ.ವಿ. ವಿದ್ಯುತ್ ಪರಿವರ್ತಕ ಸ್ಟೇಶನ್‌ಗಳನ್ನು ೧೧೦ ಕೆ.ವಿ.ಗೆ ಮೇಲ್ದರ್ಜೆಗೇರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ವಿದ್ಯುತ್‌ನ ಅಭಾವ ತಪ್ಪಿಸಲು ಸಾಲಹಳ್ಳಿಯಲ್ಲಿ ರೂ. ೧೦೬ ಕೋಟಿ ವೆಚ್ಚದ ೨೨೦ ಕೆ.ವಿ. ಸ್ಟೇಶನ್ ಕಾಮಗಾರಿ ಮುಕ್ತಾಯ ಹಂತದಲ್ಲಿದೆ.
ತಾಲೂಕಿನ ಪದಮಂಡಿ, ಸಾಲಾಪೂರ, ಮುದೇನೂರ, ಬುದ್ನಿಖುರ್ದ, ಮಾಗನೂರ, ತೋರಣಗಟ್ಟಿ, ಚಿಲಮೂರ ಗ್ರಾಮದಲ್ಲಿ ಸುಮಾರು ೨೦ ಕೋಟಿ ರೂ. ವೆಚ್ಚದ ಹೊಸ ವಿದ್ಯುತ್ತ ೧೧೦ ಕೆವಿ ಸ್ಟೇಷನ್ ಮಂಜೂರಾತಿ ದೊರೆತಿದೆ. ಪಿ.ಎಂ. ಕುಸಮ್ ಯೋಜನೆಡಿಯಲ್ಲಿ ರಾಮದುರ್ಗ, ಮೂದೇನೂರ, ಬಟಕುರ್ಕಿ ಗ್ರಾಮದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗಿದೆ ಎಂದರು.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಗಮದ ಅಧ್ಯಕ್ಷ ಸೈಯದ್ ಅಜೀಮ್ ಪೀರ ಎಸ್ ಖಾದ್ರಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯನ್ನು ರಾಜ್ಯದ ಪ್ರತಿಶತ ೯೮ ರಷ್ಟು ರಾಜ್ಯದ ಜನತೆ ಉಪಯೋಗಿಸುತ್ತಿದೆ. ಅಲ್ಲದೇ ರಾಜ್ಯ ಕಾಂಗ್ರೆಸ್ ಸರಕಾರ ಬಡವರ ಮತ್ತು ರೈತರ ಪರವಾಗಿ ಸಾಕಷ್ಟು ಕೆಲಸ ಮಾಡುತ್ತಿದೆ. ಅಲ್ಲದೇ ತಾಲೂಕಿನ ಅಭಿವೃದ್ದಿಗಾಗಿ ಶಾಸಕ ಅಶೋಕ ಪಟ್ಟಣ ಅವರು ಸಾಕಷ್ಟು ಅನುದಾನ ತಂದಿದ್ದು, ಅವರನ್ನು ಪಡೆದ ನಿವೇ ಧನ್ಯರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ವ್ಯವಸ್ಥಾಪಕಿ ನಿರ್ದೇಶಕಿ ವೈಶಾಲಿ ಎಂ.ಎನ್, ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಕಡಕೋಳ, ಪಂಚ ಗ್ಯಾರಂಟಿಗಳ ಸಮಿತಿ ಅಧ್ಯಕ್ಷ ಜಿ.ಬಿ. ರಂಗನಗೌಡ್ರ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ನಿರ್ದೆಶಕ ಎಸ್. ಜಗದೀಶ, ಬೆಳಗಾವಿ ವಲಯದ ಮುಖ್ಯ ಇಂಜಿನೀಯರ್ ಪ್ರವೀಣಕುಮಾರ ಚಿಕಡೆ ಮಾತನಾಡಿದರು.
ಇಲಾಖೆ ಅಧೀಕ್ಷಕ ಇಂಜಿನೀಯರ್ ರಾಜೇಂದ್ರ ಕೋರೆ, ಬೆಳಗಾವಿ ವಲಯ ಕಾರ್ಯನಿರ್ವಾಹಕ ಇಂಜಿನೀಯರ್ ಬಿ.ವೈ. ಹೊಳೆಗಾರ, ಗುತ್ತಿಗೆದಾರ ಗೋಪಾಲರಡ್ಡಿ ಸಂಶಿ ಸೇರಿದಂತೆ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಹೆಸ್ಕಾಂ ವಿಭಾಗದ ಇಇ ಕಿರಣ ಸಣ್ಣಕ್ಕಿ ಸ್ವಾಗತಿಸಿದರು. ಲಕ್ಷ್ಮಣ ಅಣ್ಣಿಗೇರಿ ನಿರೂಪಿಸಿದರು. ಹೆಸ್ಕಾಂ ಉಪ ವಿಭಾಗದ ಎಇಇ ಶಿವಪ್ರಕಾಶ ಕರಡಿ ವಂದಿಸಿದರು.ಪೋಟೋ ಶೀರ್ಷಿಕೆ: ೨೫ಆರ್‌ಎಂಡಿ.೧ & ೧-ಎ
ರಾಮದುರ್ಗ: ರಾಮದುರ್ಗದ ಹೆಸ್ಕಾಂ ವಿಭಾಗ ಹಾಗೂ ಉಪ ವಿಭಾಗ ಕಛೇರಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಶಾಸಕ ಅಶೋಕ ಪಟ್ಟಣ ಉದ್ಘಾಟಿಸಿದರು.