ಬಳ್ಳಾರಿ,ಆ.25: ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು. ತೊಗಲುಗೊಂಬೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಜೆ.ಟಿ ಪೌಂಡೇಷನ್ ಅಧ್ಯಕ್ಷ, ವಕೀಲರಾದ ಜೋಳದರಾಶಿ ತಿಮ್ಮಪ್ಪ ಅಭಿಪ್ರಾಯಪಟ್ಟರು.
ನಗರದ ಗುಗ್ಗರಹಟ್ಟಿಯ ಶ್ರೀಶೈಲ ಭ್ರಮರಾಂಭ ಮಲ್ಲಿಕಾರ್ಜುನ ಶಿವದೀಕ್ಷಾ ಮಂದಿರದಲ್ಲಿ ಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್ ಬಳ್ಳಾರಿ ವತಿಯಿಂದ ಹಮ್ಮಿಕೊಂಡಿದ್ದ “ನಮ್ಮ ಹಬ್ಬ” ಕಾರ್ಯಕ್ರಮದಡಿಯಲ್ಲಿ ನಡೆದ ತೊಗಲುಗೊಂಬೆ ಪ್ರದರ್ಶನ, ಜಾನಪದ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ತೊಗಲುಗೊಂಬೆ ಪ್ರದರ್ಶನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಮಾಡಿದರು. ಈಗ ತೊಗಲುಗೊಂಬೆ ನಶಿಸಿ ಹೋಗುವ ಹಂತ ತಲುಪಿದೆ. ಇದನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.
ಅಲ್ಲದೆ, ಪ್ರಸ್ತುತ ದಿನ ಮಾನಗಳಲ್ಲಿ ಪೋಷಕರು ಮಕ್ಕಳ ಕಾಳಜಿ ವಹಿಸಬೇಕು. ಮಕ್ಕಳಿಗೂ ತೊಗಲುಗೊಂಬೆ, ಬಯಲಾಟದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಅರಿವು ಮೂಡಿಸಬೇಕು. ಒಂದು ಕೋಣೆಯಲ್ಲಿ ಮೊಬೈಲ್ ಕೊಟ್ಟು ಕೂಡಿಸುವುದರಿಂದ ಮಕ್ಕಳ ಭವಿಷ್ಯವೂ ಹಾಳಾಗುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಬಗ್ಗೆ ಪಾಲಕ ಪೋಷಕರು ನಿಗಾ ವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳ್ ಮಾತನಾಡಿ, ನಾವು ಕಲೆಯನ್ನು ಉಳಿಸಿ ಬೆಳೆಸಬೇಕು. ಜೀವನದಲ್ಲಿ ಯಶಸ್ಸು ಜಾಣಬೇಕಾದರೆ ಸತತ ಪ್ರಯತ್ನ ಮತ್ತು ಶ್ರಮ ಅಗತ್ಯವಾಗಿದೆ. ವಿದ್ಯಾರ್ಥಿಗಳು ಸಹ ಜೀವನದಲ್ಲಿ ಯಶಸ್ಸು ಕಾಣಲು ಆಸಕ್ತಿ ಮತ್ತು ನಿರಂತರ ಅಭ್ಯಾಸ ಬಹಳ ಮುಖ್ಯ ಎಂದು ತಿಳಿಸಿದರು.
ಎಸ್ ಆರ್ ಕೆ ಜಿಲಾನ್ ಬಾಷಾ ಅವರು ಮಾತನಾಡಿದರು. ಎರ್ರಿಸ್ವಾಮಿ ತೊಗಲುಗೊಂಬೆ ಕಲಾಮೇಳ ಟ್ರಸ್ಟ್ ಅಧ್ಯಕ್ಷ ವೈ. ಪ್ರಭು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಶ್ರೀಶೈಲ ಭ್ರ್ರಮರಾಂಭ ಮಲ್ಲಿಕಾರ್ಜುನ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ರಾಜಶೇಖರಗೌಡ ಉಪಸ್ಥಿತರಿದ್ದರು.ಕೆ. ಹೊನ್ನೂರಸ್ವಾಮಿ ಮತ್ತು ತಂಡದವರಿAದ ಬಾ ಮರಳಿ ಶಾಲೆಗೆ ತೊಗಲುಗೊಂಬೆ ಪ್ರದರ್ಶನ ನಡೆಯಿತು.ಪ್ರತಿಕ್ಷಾ ಮತ್ತು ತಂಡದವರಿAದ ಜಾನಪದ ನೃತ್ಯ ಪ್ರದರ್ಶನ ನಡೆಯಿತು.ಆರಂಭದಲ್ಲಿ ಕೆ.ನೇಹ ಪ್ರಾರ್ಥನಾ ಗೀತೆ ಹಾಡಿದರು. ಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್ ಕಾರ್ಯದರ್ಶಿ ರೇಖಾಪ್ರಭು ವಂದಿಸಿದರು.