ಚೆನ್ನೈ: ನಾನು ಒಬ್ಬ ರಾಜಕೀಯ ವ್ಯಕ್ತಿಯಾಗಿದ್ದರೂ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ನನ್ನ ಜವಾಬ್ದಾರಿಯನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸುತ್ತೇನೆ ಎಂದು ಇಂಡಿಯಾ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ, ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿ ಭಾನುವಾರ ತಿಳಿಸಿದ್ದಾರೆ.
ನ್ಯಾ.ರೆಡ್ಡಿ ಅವರು ನಕ್ಸಲಿಸಂಗೆ ಸಹಾಯ ಮಾಡಿದ ವ್ಯಕ್ತಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ ಎರಡು ದಿನದ ಬಳಿಕ ಅವರು ಈ ಹೇಳಿಕೆ ನೀಡಿದರು.ಚೆನ್ನೈನ ತ್ಯಾಗರಾಯನ ನಗರದಲ್ಲಿ ಮೈತ್ರಿಕೂಟದ ನಾಯಕರು ಮತ್ತು ಸಂಸದರನ್ನು ಭೇಟಿಯಾದ ಅವರು ಚುನಾವಣೆಗೆ ಬೆಂಬಲ ಕೋರಿದರು. ಆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
“ನನಗೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧವಿಲ್ಲದ ಕಾರಣ ನನ್ನನ್ನು ವಿರೋಧ ಪಕ್ಷದ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ನಾನು ದೇಶದ ಶೇ.60ರಷ್ಟು ಮತದಾರರನ್ನು ಪ್ರತಿನಿಧಿಸುತ್ತೇನೆ. 1971ರಲ್ಲಿ ವಕೀಲನಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ್ದು, ಅಂದಿನಿಂದ ನ್ಯಾಯಾಂಗದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಯಾವಾಗಲೂ ಸಂವಿಧಾನ ಮತ್ತು ಕಾನೂನನ್ನು ಗೌರವಿಸುತ್ತೇನೆ” ಎಂದರು.