ಮುದ್ದೇಬಿಹಾಳ: ಕುರುಬ ಸಮುದಾಯಕ್ಕೆ ಪರಿಶಿಷ್ಟ ಜಾತಿ (ಎಸ್ಟಿ) ಮೀಸಲಾತಿ ಸೇರಿ ಕೆಲ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಗಳ ಕುರುಬ ಸಮುದಾಯ ಮುಖಂಡರ ಜನ ಜಾಗೃತಿ ಸಮಾವೇಶ ಆ.೨೪ರಂದು ಇಲ್ಲಿನ ಆಲಮಟ್ಟಿ ರಸ್ತೆ ಪಕ್ಕದಲ್ಲಿರುವ ಮದರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಸಮಾವೇಶದ ಸಂಚಾಲಕ ನ್ಯಾಯವಾದಿ ಪಿ.ಬಿ.ಮಾತಿನ್ ತಿಳಿಸಿದರು. ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆ ಕಚೇರಿಯಲ್ಲಿ ಗುರುವಾರ ಸಮಾವೇಶದ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು ವೇದಿಕೆ ಮತ್ತು ವಿವಿಧ ಸಂಘಟನೆಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಸಮಾವೇಶ ನಡೆಯಲಿದೆ ಎಂದರು. ನ್ಯಾಯವಾದಿಗಳಾದ ಎಚ್.ವೈ.ಪಾಟೀಲ, ಬಿ.ವೈ.ಮೇಟಿ ಅವರು ಮಾತನಾಡಿ, ಸಮಾವೇಶದಲ್ಲಿ ಕುರುಬ ಸಮುದಾಯದ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವಿಷಯಗಳ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದರು. ಎಸ್ಟಿ ಮೀಸಲಾತಿ, ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ೧೦ ಕೋಟಿ ರೂ ವೆಚ್ಚದ ಕನಕಶ್ರೀ ಭವನ ನಿರ್ಮಾಣ, ಕುರುಬ ಸಮುದಾಯದ ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಐಎಎಸ್, ಕೆಎಎಸ್ ಪರೀಕ್ಷಾ ತರಬೇತಿ ಕೇಂದ್ರ, ಪ್ರತಿ ತಾಲೂಕಿನಲ್ಲಿ ಕನಕಶ್ರೀ ಇಂಗ್ಲೀಷ್ ಮೀಡಿಯಂ ಶಾಲೆ, ಪಿಯು ಕಾಲೇಜು ಆರಂಭ, ಜಿಲ್ಲಾ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿ ಕೆಂದ್ರ ಆರಂಭ ಸೇರಿ ಐದು ಪ್ರಮುಖ ಬೇಡಿಕೆಗಳ ಈಡೇರಿಕೆ ಕುರಿತು ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಸ್ವೀಕರಿಸಲಾಗುತ್ತದೆ. ರಾಜ್ಯಮಟ್ಟದಲ್ಲಿ ಎಸ್ಟಿ ಮಿಸಲಾತಿ ಹೋರಾಟಕ್ಕೆ ಚಾಲನೆ ನೀಡಲಾಗುತ್ತದೆ. ಪಕ್ಷಾತೀತವಾಗಿರುವ ಈ ಸಮಾವೇಶಕ್ಕೆ ಎಲ್ಲ ರಾಜಕೀಯ ಪಕ್ಷಗಳಲ್ಲಿರುವ ಕುರುಬ ಸಮುದಾಯದ ಮುಖಂಡರು ಆಂಕರಿಕ ಕಲಹ, ವೈಯುಕ್ತಿಕ ದ್ವೇಷ ಮರೆತು ಆಗಮಿಸಿ ಸಲಹೆ ಸೂಚನೆ ನೀಡಿ ಯಶಸ್ವಿಗೊಳಿಸುವಂತೆ ಮನವಿ ಮಾಡಲಾಯಿತು. ಹಿರೇಮುರಾಳ ಗ್ರಾಪಂ ಮಾಜಿ ಅಧ್ಯಕ್ಷ ಸಂಗಯ್ಯ ಹಾಲಗಂಗಾಧರಮಠ, ಸಮಾಜದ ಮುಖಂಡರು ಇದ್ದರು.