ರಾಮದುರ್ಗ: ಸೆ. ೧೪ ರಂದು ನಡೆಯಲಿರುವ ಖಾನಪೇಠದ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಖಾನೆಯ ಸರ್ವ ಶೇರುದಾರರ ಸಭೆಯನ್ನು ಪಟ್ಟಣದ ಶ್ರೀನಿವಾಸ ಸಭಾ ಭವನದಲ್ಲಿ ಆ.೨೪ ರಂದು ಬೆಳಿಗ್ಗೆ ೧೧ ಘಂಟೆಗೆ ಕರೆಯಲಾಗಿದೆ ಎಂದು ಮುಖಂಡ ಬಸವರಾಜ ಹಿರೇರಡ್ಡಿ ಹೇಳಿದರು.
ಪಟ್ಟಣದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಶೇರುದಾರರ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧೆ ಮಾಡಲು ಮೀಸಲಾತಿ ಅನುಸಾರವಾಗಿ ಪೆನೆಲ್ ರಚನೆ ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಲಾಗುತ್ತಿದೆ. ಕಾರ್ಖಾನೆಯ ಸರ್ವ ಶೇರುದಾರರು ಹಾಗೂ ರೈತ ಮುಖಂಡರು, ಹಿತೈಸಿಗಳು, ಕಬ್ಬು ಬೆಳೆಗಾರರು ಸಭೆಯಲ್ಲಿ ಪಾಲ್ಗೊಂಡು ಸೂಕ್ತ ಸಲಹೆ ಸೂಚನೆ ನೀಡಬೇಕೆಂದು ಅವರು ಮನವಿ ಮಾಡಿದರು.
ಕಳೆದ ಚುನಾವಣೆಯಲ್ಲಿ ಅಂದಿನ ಆಡಳಿತ ಮಂಡಳಿಯ ಪಿತೂರಿಯಿಂದ ೧೯ ಸಾವಿರ ಶೇರುದಾರರ ಪೈಕಿ ಕೇವಲ ೪-೫ ಸಾವಿರ ಶೇರುದಾರರಿಗೆ ಮಾತ್ರ ತಮ್ಮ ಹಕ್ಕು ಚಲಾಯಿಸುವ ಅವಕಾಶ ಇರುವಂತೆ ಮತದಾರರ ಪಟ್ಟಿ ತಯಾರಿಸಲಾಗಿತ್ತು. ಪ್ರಸಕ್ತ ಚುನಾವಣೆಯಲ್ಲಿ ಕಾರ್ಖಾನೆಯ ಸರ್ವ ಶೇರುದಾರರಿಗೆ ತಮ್ಮ ಹಕ್ಕು ಚಲಾಯಿಸುವ ಅವಕಾಶವಿದ್ದು, ಸಹಕಾರ ಇಲಾಖೆಯ ನಿಯಮಗಳ ಅಡಿಯಲ್ಲಿ ನ್ಯಾಯಸಮ್ಮತ ಚುನಾವಣೆ ಜರುಗಲು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ. ರೈತರು, ಶೇರುದಾರರು ಕಾರ್ಖಾನೆಯ ಹಿತ ಕಾಯುವ ವ್ಯಕ್ತಿಗಳನ್ನು ಆಡಳಿತ ಮಂಡಳಿಯ ಚುನಾವಣೆಯಲ್ಲಿ ಆಯ್ಕೆ ಮಾಡುವ ಗುರುತರ ಜವಾಬ್ದಾರಿ ದೊರೆತಂತಾಗಿದೆ ಎಂದು ಹೇಳಿದರು.
ಹಿರಿಯ ಮುಖಂಡ ಬಾಬಣ್ಣ ಫತ್ತೇಪೂರ ಮಾತನಾಡಿ, ಸಕ್ಕರೆ ಕಾರ್ಖಾನೆಗೆ ಪ್ರಥಮ ಆಡಳಿತ ಮಂಡಳಿ ಆಯ್ಕೆ ಸಂದರ್ಭದಲ್ಲಿ ಸರ್ವ ಸದಸ್ಯರ ಅಭಿಪ್ರಾಯದಂತೆ ಅವಿರೋಧ ಆಯ್ಕೆ ಮಾಡಲಾಗಿತ್ತು. ತದನಂತರ ದಿನಗಳಲ್ಲಿ ಚುನಾವಣೆಗಳು ನಡೆದವು. ಸಧ್ಯ ಆ.೨೪ ರಂದು ನಡೆಯುವ ಶೇರುದಾರರ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾಣ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯರಾದ ಕಲ್ಲಣ್ಣ ವಜ್ರಮಟ್ಟಿ, ಚಂದ್ರಶೇಖರ ಹಿರೇಮಠ, ಸೋಮಶೇಖರ ಸಿದ್ಲಿಂಗಪ್ಪನವರ, ಜಿ.ಬಿ. ರಂಗನಗೌಡ್ರ, ಗೋಪಾಲ ಸಂಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು.