ವಿದ್ಯಾರ್ಥಿಗಳು ಸರಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು: ಐನಾಪೂರ

Pratibha Boi
ವಿದ್ಯಾರ್ಥಿಗಳು ಸರಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು: ಐನಾಪೂರ
WhatsApp Group Join Now
Telegram Group Join Now

ರಾಮದುರ್ಗ: ಹಿಂದುಳಿದ ವರ್ಗ, ದೀನ ದಲಿತರ ಏಳ್ಗೆಗಾಗಿ ಹಾಗೂ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ಧೇಶದಿಂದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜು ಅರಸುರವರು ರಾಜ್ಯದಲ್ಲಿ ವಸತಿ ನಿಲಯಗಳನ್ನು ತೆರೆದು ನೊಂದವರ ಪಾಲಿನ ನಂದಾದೀಪವಾಗಿ ಹೊರಹೊಮ್ಮಿದ್ದಾರೆ ಎಂದು ತಾ.ಪಂ ಇಓ ಬಸವರಾಜ ಐನಾಪೂರ ಹೇಳಿದರು.
ಪಟ್ಟಣದ ತಾ.ಪಂ. ಸಭಾ ಭವನದಲ್ಲಿ ತಾಲೂಕು ಆಡಳಿತ, ತಾ.ಪಂ, ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಡಿ. ದೇವರಾಜ ಅರಸು ಅವರ ೧೧೦ ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಸತಿ ನಿಲಯದಲ್ಲಿ ಅಧ್ಯಯನ ಮಾಡುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಸರಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡು ದೇಶಕ್ಕೆ ಆಸ್ತಿಯಾಗಿ ಬೆಳೆದು ನಿಲ್ಲಬೇಕು. ಅಂದಾಗ ದೇವರಾಜ ಅರಸು ಅವರ ನಿಜವಾದ ಕಲ್ಪನೆ ಸಾಕಾರಗೊಂಡಂತಾಗುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕೆಂದು ಹೇಳಿದರು.
ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಕಡಕೋಳ ಮಾತನಾಡಿ, ನಾಲ್ಕು ದಶಕಗಳ ಹಿಂದೆ ಈಗಿನ ಮಕ್ಕಳ ಶಿಕ್ಷಣಕ್ಕೆ ಸಿಗುವ ಆಧ್ಯತೆ ಸಿಗುತ್ತಿರಲಿಲ್ಲ. ಸ್ವಂತ ಶ್ರಮದಿಂದ ಶಿಕ್ಷಣ ಹೊಂದುವುದು ಅನಿವಾರ್ಯವಾಗಿತ್ತು. ಡಿ. ದೇವರಾಜ ಅರಸು ಅವರ ಶ್ರಮದಿಂದ ಇಂದು ಎಲ್ಲ ಸೌಲಭ್ಯಗಳು ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಸಿಗುತ್ತಿವೆ. ಸಿಗುವ ಸೌಲಭ್ಯಗಳಲ್ಲಿ ಕಲ್ಲು ಹುಡುಕುವುದುಕ್ಕಿಂತ ನಿಖರ ಗುರಿ ತಲುಪುವತ್ತ ಶ್ರಮಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲೂಕು ಹಿಂದುಳಿದ ವರ್ಗಗಳ ಪ್ರಭಾರ ಕಲ್ಯಾಣಾಧಿಕಾರಿ ರವಿ ಪರವಿನಾಯ್ಕರ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಭ್ಯುದಯಕ್ಕೆ ರಾಜ್ಯ ಸರಕಾರ ಸಂಕಲ್ಪ ತೊಟ್ಟಿದ್ದು, ಸ್ಥಳೀಯ ಶಾಸಕರ ಅವಿರತ ಪ್ರಯತ್ನದಿಂದ ತಾಲೂಕಿನ ಸುರೇಬಾನ ಗ್ರಾಮದಲ್ಲಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಆರಂಭವಾಗಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಗ್ರೇಡ್-೨ ತಹಶೀಲ್ದಾರ ಸಂಜಯ್ ಖಾತೇದಾರ, ಬ್ಯಾಂಕ್ ಆಫ್ ಬರೋಡಾ ಶಾಖಾ ವ್ಯವಸ್ಥಾಪಕ ಹಣಮಂತ್ರಾಯ ಬಿರಾದಾರ, ಬಿಸಿಎಂ ಇಲಾಖೆಯ ಸಿ.ಎಸ್. ಬಿರಾದಾರ, ರತ್ನಾ ಮೇಟಿ ಮಾತನಾಡಿದರು. ಸಿ.ಎಸ್. ಬೆಂಬಳಗಿ ಕಾಲೇಜಿನ ಪ್ರಾಚಾರ್ಯ ಡಾ. ಪ್ರಕಾಶ ತೆಗ್ಗಿಹಳ್ಳಿ ಉಪನ್ಯಾಸ ನೀಡಿದರು.
ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ವ್ಯಾಸಾಂಗ ಮಾಡಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಕಛೇರಿ ಅಧೀಕ್ಷಕಿ ಸುನಂದಾ ವಾಲಿ, ಪಶುಸಂಗೋಪಣಾ ಇಲಾಖೆ ವೈದ್ಯಾಧಿಕಾರಿ ಗಿರೀಶ ಪಾಟೀಲ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ಶಿವಪ್ರಸಾದ ಪಾಟೀಲ ನಿರೂಪಿಸಿದರು. ಮಲ್ಲಿಕಾರ್ಜುನ ನಾಯಕ ವಂದಿಸಿದರು.

 

WhatsApp Group Join Now
Telegram Group Join Now
Share This Article