ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಬೇಕೆಂಬ ಉದ್ದೇಶದಿಂದ ಪದಾಧಿಕಾರಿಗಳ ನೇಮಕ: ವಿನಯಕುಮಾರ ಸೊರಕೆ

Pratibha Boi
ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಬೇಕೆಂಬ ಉದ್ದೇಶದಿಂದ ಪದಾಧಿಕಾರಿಗಳ ನೇಮಕ: ವಿನಯಕುಮಾರ ಸೊರಕೆ
WhatsApp Group Join Now
Telegram Group Join Now

ಬೆಳಗಾವಿ: ಕೆಪಿಸಿಸಿ ಪ್ರಚಾರ ಸಮಿತಿ ಬಲಿಷ್ಠಗೊಳಿಸಬೇಕೆಂಬ ಉದ್ದೇಶದಿಂದ ರಾಜ್ಯದ ೫೮ ಸಾವಿರ ಬೂತ್ ಗಳಲ್ಲಿ ಬೂತ್‌ಗೊಬ್ಬರಂತೆ ಸಂಘಟನೆಗೆ ಸೇರ್ಪಡೆಯಾದರೆ ಕನಿಷ್ಟ ಒಂದು ಲಕ್ಷ ಸದಸ್ಯರು ನೇಮಕವಾಗುತ್ತಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯಕುಮಾರ ಸೊರಕೆ ತಿಳಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಕರ್ನಾಟಕ ಪ್ರಚಾರ ಸಮಿತಿಯ ಬೆಳಗಾವಿ ಗ್ರಾಮೀಣ, ಬೆಳಗಾವಿ ನಗರ ಘಟಕದಿಂದ ಹಮ್ಮಿಕೊಂಡಿದ್ದ ಪ್ರಚಾರ ಸಮಿತಿ ಸಭೆ ಉದ್ದೇಶಿಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಬೇಕೆಂಬ ಉದ್ದೇಶದಿಂದ ಕೆಪಿಸಿಸಿ ಜಿಲ್ಲಾ ಪ್ರಚಾರ ಸಮಿತಿ, ಬ್ಲಾಕ್ ಪ್ರಚಾರ ಸಮಿತಿ, ಪಂಚಾಯತ್ ಮಟ್ಟದ ಪ್ರಚಾರ ಸಮಿತಿಯಲ್ಲಿ ತಲಾ ೨೩ ಜನ ಸದಸ್ಯರನ್ನೊಳಗೊಂಡ ಪದಾಧಿಕಾರಿಗಳನ್ನು ನೇಮಿಸಲಾಗುತ್ತಿದೆ ಎಂದು ತಿಳಿಸಿದರು.

ಕೆಪಿಸಿಸಿ ಪ್ರಚಾರ ಸಮಿತಿ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಪ್ರಚಾರ ಮಾಡುತ್ತದೆ ಎಂಬ ಮಾತಿತ್ತು. ಈಗ ಹೈಕಮಾಂಡ್ ನಿರಂತರವಾಗಿ ಕೆಲಸ ಮಾಡಬೇಕೆಂದು ಸೂಚನೆ ನೀಡಿದೆ. ಅದರಂತೆ ರಾಜ್ಯಾದ್ಯಂತ ನಾಲ್ಕು ಜಿಲ್ಲೆಗಳನ್ನು ಹೊರತುಪಡಿಸಿ ಎಲ್ಲ ಜಿಲ್ಲೆಯಲ್ಲೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಪ್ರವಾಸ ಕೈಗೊಂಡಿದ್ದೇವೆ. ಜಿಲ್ಲಾ ಸಮಿತಿಗೆ ೨೩ ಜನ, ಬ್ಲಾಕ್ ಸಮಿತಿಗೆ ೨೩ ಜನ ಹಾಗೂ ಪಂಚಾಯಿತಿ ಮಟ್ಟದಲ್ಲಿ ಒಂದೊಂದು ಬೂತ್‌ನಲ್ಲಿ ೨ ಜನರಂತೆ ಸೇರ್ಪಡೆ ಮಾಡಿಕೊಂಡು ಸಮಿತಿ ರಚಿಸಲಾಗುತ್ತದೆ ಎಂದರು.

ಬರುವ ದಿನಗಳಲ್ಲಿ ಜಿಪಂ, ತಾಪಂ ಚುನಾವಣೆ ಬರಲಿದ್ದು, ಇವು ಕಾರ್ಯಕರ್ತರ ಚುನಾವಣೆಗಳಾಗಿವೆ. ಕಾರ್ಯಕರ್ತರನ್ನು ಸಜ್ಜುಗೊಳಿಸುವ ಅಗತ್ಯತೆ ಇದೆ. ಈ ಹಿನ್ನೆಲೆ ಸಂಘಟನಾ ಶಕ್ತಿಯನ್ನು ಹೆಚ್ಚಿಸಿ ಪ್ರತಿ ಜಿಲ್ಲೆಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಶೀರ್ಷಿಕೆಯಡಿ ಜಾಗೃತಿ ಕಾರ್ಯಾಗಾರ ನಡೆಸಲಾಗುವುದು. ಕಾರ್ಯಾಗಾರದಲ್ಲಿ ಪಕ್ಷದ ಸಿದ್ಧಾಂತ ಬಗ್ಗೆ ಅರಿವು ಮೂಡಿಸುವುದು, ರಾಜ್ಯ ಸರ್ಕಾರದ ಗ್ಯಾರಂಟಿ ಬಗ್ಗೆ ಪ್ರಚಾರ ಮಾಡುವುದು, ವಿಪಕ್ಷಗಳ ತಪ್ಪು ನಿರ್ಧಾರಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವಂತೆ ಮಾಹಿತಿ ನೀಡಲಾಗುತ್ತದೆ ಎಂದರು.

ಇನ್ನು ಗ್ಯಾರಂಟಿ ಯೋಜನೆಗಳು ರಾಜ್ಯವನ್ನು ದಿವಾಳಿ ಮಾಡುತ್ತವೆ ಎಂದು ಬಿಜೆಪಿ ನಾಯಕರು ಸುಳ್ಳು ಪ್ರಚಾರ ಮಾಡುತ್ತಿದ್ದರು. ಆದರೆ ದೇಶದಲ್ಲೇ ಕರ್ನಾಟಕ ಅತಿ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಕಾರಣ ಎಂದು ಇದೇ ವೇಳೆ ತಿಳಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಮುನೀರ್ ಜನ್ಸಾಲೆ, ಬೆಳಗಾವಿ ಗ್ರಾಮೀಣ ಪ್ರಚಾರ ಸಮಿತಿ ಅಧ್ಯಕ್ಷ ರಾಜಾ ಸಲೀಂ, ಯುವ ನಾಯಕ ಮೃಣಾಳ್ ಹೆಬ್ಬಾಳಕರ್ ಸೇರಿದಂತೆ ಇತರರು ಇದ್ದರು.

WhatsApp Group Join Now
Telegram Group Join Now
Share This Article