ರಾಯಬಾಗ: ವಿಶೇಷ ಪ್ರಕರಣಗಳಲ್ಲಿ ಮಧ್ಯಸ್ಥಗಾರರ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸುವ ಉದ್ದೇಶದಿಂದ ಖಾಯಂ ಜನತಾ ನ್ಯಾಯಾಲಯ ಅಭಿಯಾನ ಹಮ್ಮಿಕೊಂಡಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೆರೋಟ್ಟಿ ಹೇಳಿದರು.
ಸೋಮವಾರ ಸಾಯಂಕಾಲ ತಾಲೂಕಿನ ಮೊರಬ ಗ್ರಾಮದ ಮಹಾದೇವ ದೇವಸ್ಥಾನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಖಾಯಂ ಜನತಾ ನ್ಯಾಯಾಲಯ ಬೆಳಗಾವಿ ಹಾಗೂ ಮಧ್ಯಸ್ಥಿಕೆ ಮೂಲಕ ವ್ಯಾಜ್ಯಗಳ ವಿಲೇವಾರಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಸ್.ಸಿ, ಎಸ್.ಟಿ, ಮಹಿಳೆಯರು, ಮಕ್ಕಳು, ಕಾರ್ಖಾನೆಯ ಕಾರ್ಮಿಕರು, 3 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಉಚಿತ ಕಾನೂನು ಸಲಹೆ ಮತ್ತು ನೆರವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಪಿ.ಎಮ್.ದರೂರ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ದಾನಪ್ಪ, ತಹಶೀಲ್ದಾರ ಸುರೇಶ ಮುಂಜೆ, ಸ.ಸ.ಅಭಿಯೋಜಕ ಮಹಾವೀರ ಗಂಡವ್ವಗೋಳ, ವಕೀಲರಾದ ಆರ್.ಎಸ್.ಶಿರಗಾಂವೆ, ಎಮ್.ಎಮ್.ಚಿಂಚಲಿಕರ, ಎಮ್.ಎಮ್.ಪಾಟೀಲ, ಪಿ.ಎಮ್.ಕಾಂಬಳೆ, ಟಿ.ಎನ್.ಕಾಂಬಳೆ, ಶಿಕ್ಷಕ ಸುಖದೇವ ಕಾಂಬಳೆ ಸೇರಿ ಅನೇಕರು ಇದ್ದರು.