ನವದೆಹಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ದೇಶದ ಹಲವು ಭಾಗದಲ್ಲಿ ಭಾರಿಯಿಂದ ಅತಿ ಹೆಚ್ಚು ಮಳೆಯಾಗುತ್ತಿದ್ದು, ವಿಶೇಷವಾಗಿ ದಕ್ಷಿಣ, ಪೂರ್ವ ಮತ್ತು ಪಶ್ಚಿಮ, ಕೇಂದ್ರ ಭಾರತದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯ ವಾಯುವ್ಯ ಪಶ್ಚಿಮ ಮಧ್ಯ ಮತ್ತು ಉತ್ತರ ಆಂಧ್ರಪ್ರದೇಶ, ದಕ್ಷಿಣ ಒಡಿಶಾ ಕರಾವಳಿಗಳಲ್ಲಿ ಕಡಿಮೆ ಒತ್ತಡ ಪ್ರದೇಶ ರೂಪುಗೊಂಡಿದೆ. ಒಡಿಶಾದಲ್ಲಿ ಕಡಿಮೆ ಒತ್ತಡ ಪ್ರದೇಶ ತೀವ್ರಗೊಳ್ಳಲಿದ್ದು, ರಾಜ್ಯದ ಗೋಪಾಲಪುರದಿಂದ ದಕ್ಷಿಣಕ್ಕೆ 30 ಕಿ.ಮೀ ವರೆಗೆ ಹಾಗೂ ಆಂಧ್ರಪ್ರದೇಶದ ಕಳಿಂಗಪಟ್ಟಣದಿಂದ ಈಶಾನ್ಯಕ್ಕೆ 110 ಕಿಮೀ ದೂರದಲ್ಲಿ ಈ ಒತ್ತಡ ಪ್ರದೇಶ ರೂಪುಗೊಳ್ಳಲಿದೆ. ಈ ಒತ್ತಡ ಪ್ರದೇಶವೂ ದಕ್ಷಿಣ ಒಡಿಶಾ ಹಾಗೂ ಉತ್ತರ ಆಂಧ್ರಪ್ರದೇಶ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.