ಬಾಗಲಕೋಟೆ: ಸಂಗೀತ ಕಲಾವಿದ ರಾಘವೇಂದ್ರ ಗುರುನಾಯಕ(೫೪) ನಿಧನ ಹೊಂದಿದರು. ಸಹೋದರ ಮುಕುಂದ ಗುರುನಾಯಕ, ಓರ್ವ ಸಹೋದರಿ, ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ. ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿದ್ದ ಅವರು ಪ್ರತಿವರ್ಷ ಯುವಕರನ್ನು ಸಂಘಟಿಸಿ ಮಂತ್ರಾಲಯಕ್ಕೆ ಪಾದಯಾತ್ರೆ ತೆರಳುತ್ತಿದ್ದರು. ಹರ್ಮೋನಿಯಂ, ತಬಲಾದಲ್ಲಿ ನಿಪುಣತೆ ಹೊಂದಿದ್ದ ಅವರು ನಾಡಿನ ಖ್ಯಾತ ಕಲಾವಿದರೊಂದಿಗೆ ಕಾರ್ಯಕ್ರಮಗಳನ್ನು ನೀಡಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಸೋಮವಾರ ಮಧ್ಯಾಹ್ನ ನಿಧನ ಹೊಂದಿದರು. ಸಂಜೆ ಅಂತ್ಯ ಸಂಸ್ಕಾರದ ನಂತರ ನಡೆದ ಸಂತಾಪ ಸೂಚನಾ ಸಭೆಯಲ್ಲಿ ಎಸ್.ವಿ.ದೇಸಾಯಿ, ಗಾಯಕ ಸಂತೋಷ ಗದ್ದನಕೇರಿ, ಕೇಶವ ರಘವೀರ, ಗುರುರಾಜ ಕುಲಕರ್ಣಿ ಮತ್ತಿತರರು ಮಾತನಾಡಿ ವಿಪ್ರ ಸಮಾಜಕ್ಕೆ ರಾಘವೇಂದ್ರ ಗುರುನಾಯಕ ನೀಡಿರುವ ಕೊಡುಗೆಗಳನ್ನು ಸ್ಮರಿಸಿದರು. ಸುಕ್ಷೇತ್ರ ಯಲಗೂರ ಕಾರ್ತಿಕೋತ್ಸವದಲ್ಲಿ ಗುರುನಾಯಕ ಕಲಾವಿದರೊಂದಿಗೆ ಕಾರ್ಯಕ್ರಮ ನೀಡುತ್ತಿದ್ದರು. ಯಲಗೂರದಲ್ಲೂ ಸಹ ಸಭೆ ನಡೆಸಿ ಸಂತಾಪ ಸೂಚಿಸಲಾಯಿತು.