ಬಳ್ಳಾರಿ ಆ 19. ತುಂಗಭದ್ರಾ ಜಲಾಶಯದ ವಿಚಾರದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಬೇಜವಾಬ್ದಾರಿ ಧೋರಣೆಗಳನ್ನು ತಾಳಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿ ರಾಜ್ಯ ರೈತ ಮೋರ್ಚಾ ಘಟಕದ ಉಪಾಧ್ಯಕ್ಷರಾದ ಎಸ್.ಗುರುಗಲಿಂಗನಗೌಡ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಗಳ ದುರಸ್ತಿಯಲ್ಲಿ ಕರ್ನಾಟಕ ಸರ್ಕಾರ ದಿವ್ಯ ನಿರ್ಲಕ್ಷ್ಯ ತಾಳಿದ್ದಲ್ಲದೆ ರೈತರಿಗೆ ದ್ರೋಹ ಎಸಗಿದೆ. ಆ ಮೂಲಕ ರೈತರ ಬೆಳೆಗಳು ನಷ್ಟ ಹೊಂದಿದಲ್ಲಿ ಪ್ರತಿ ಎಕರೆಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಧನ ನೀಡಬೇಕೆಂದು ತಾಕೀತು ಮಾಡಿದ್ದಾರೆ. ಸರ್ಕಾರದ ಒಬ್ಬ ಜವಾಬ್ದಾರಿಯುತ ಸಚಿವರಾಗಿ ತಂಗಡಗಿ ಬೇಜವಾಬ್ದಾರಿ ಮತ್ತು ಬಾಲಿಶ ಹೇಳಿಕೆಗಳನ್ನು ನೀಡಿ ರೈತರಲ್ಲಿ ಆತಂಕ ಸೃಷ್ಟಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ಸುಳ್ಳು ಹೇಳಿ ಅಧಿಕಾರ ಪಡೆದ ನೀವು, ಆಡಳಿತದಲ್ಲೂ ಸುಳ್ಳು ಹೇಳಿ ರೈತರು ಮತ್ತು ಕೂಲಿಕಾರರ ಬದುಕನ್ನು ಬೀದಿಪಾಲು ಮಾಡಬೇಡಿ ಎಂದು ಕಿಡಿ ಕಾರಿದ್ದಾರೆ.
ಕ್ರಸ್ಟ್ ಗೇಟ್ ಅಳವಡಿಸಿ:ತುಂಗಭದ್ರಾ ಜಲಾಶಯದ ತಜ್ಞರ ಸಲಹೆ ಪಡೆದು ಕೂಡಲೇ ಮುಂದಿನ ಹಂಗಾಮು ಮುಗಿದ ನಂತರ, ಪ್ರತಿ ಗುತ್ತಿಗೆದಾರನಿಗೆ ಮೂರು ಗೇಟುಗಳಂತೆ ನೀಡಿ, ಮೂರು ತಿಂಗಳ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ. ಇದರಿಂದ ರೈತರಿಗೆ ಎರಡು ಬೆಳೆಗಳೂ ಸಿಗುತ್ತವೆ ಮತ್ತು ಜಲಾಶಯದ ಸುರಕ್ಷತೆಯೂ ಖಚಿತವಾಗುತ್ತದೆ. ರೈತರಿಗೆ ನಿರೀಕ್ಷೆಯಂತೆ ಎರಡೂ ಬೆಳೆಗಳೂ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಜಲಾಶಯಕ್ಕೆ ಯಾವುದೇ ಅಪಾಯ ಎದುರಾಗದಿರುವಂತೆ ತಜ್ಞ ಇಂಜಿನಿಯರುಗಳ ಸಲಹೆಗಳಂತೆ ಕ್ರಸ್ಟ್ ಗೇಟ್ ಗಳ ಅಳವಡಿಕೆ ಮಾಡಬೇಕೆಂದು ತಿಳಿಸಿದ್ದಾರೆ.
ಸರ್ಕಾರದ್ದು ಭಂಡ ಧೈರ್ಯ:ಕಳೆದ ಜೂನ್ ೨೫ ರಂದು ಬೆಂಗಳೂರಿನಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆದಿತ್ತು. ಈ ಸಭೆ ನಡೆಯುವ ಮೂರು ತಿಂಗಳು ಮುಂಚೆಯೇ ಕೇಂದ್ರ ಜಲಶಕ್ತಿ ಸಚಿವಾಲಯದ ತಾಂತ್ರಿಕ ತಜ್ಞರ ಸಮಿತಿಯು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, ಗೇಟುಗಳ ಶಿಥಿಲಾವಸ್ಥೆಯ ಬಗ್ಗೆ ನಮಗ್ರ ಅಧ್ಯಯನ ನಡೆಸಿತ್ತು. “ಗೇಟುಗಳನ್ನು ತಕ್ಷಣವೇ ಬದಲಿಸಲೇಬೇಕು’ ಎಂದು ಸ್ಪಷ್ಟ ಎಚ್ಚರಿಕೆೆ ನೀಡಿದ್ದರೂ ಸಾರಾಸಗಟಾಗಿ ನಿರ್ಲಕ್ಷಿಸಿ, ಭಂಡ ಧೈರ್ಯದಿಂದ ಜಲಾಶಯದಲ್ಲಿ ೮೦ ಟಿಎಂಸಿ ನೀರನ್ನು ಸರ್ಕಾರ ಸಂಗ್ರಹಿಸಿದೆ ಎಂದು ಆರೋಪಿಸಿದ್ದಾರೆ.
ವಿಶ್ವಾಸ ಕಳೆದುಕೊಂಡ ಸರ್ಕಾರ:ಅಂದೇ ಸರಿಯಾದ ಯೋಜನೆ ರೂಪಿಸಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಕ್ರಸ್ಟ್ ಗೇಟ್ ಗಳನ್ನು ಆದ್ಯತೆ ಮೇರೆಗೆ ಬೇಸಿಗೆಯಲ್ಲಿ ಸರಿಪಡಿಸಬೇಕಾಗಿತ್ತು. ಆ ಅವಧಿಯಲ್ಲಿ ಎಲ್ಲಾ ೩೩ ಗೇಟುಗಳ ದುರಸ್ತಿ ಕಾಮಗಾರಿಯನ್ನು ಒಂದೇ ಗುತ್ತಿಗೆದಾರನಿಗೆ ನೀಡುವ ಬದಲು, ೧೧ ಗುತ್ತಿಗೆದಾರರಿಗೆ ತಲಾ ೩ ಗೇಟುಗಳಂತೆ “ತುಂಡು ಗುತ್ತಿಗೆ’ ನೀಡಿದ್ದರೆ, ಪ್ರತಿಯೊಬ್ಬರಿಗೂ ಒಂದು ಗೇಟು ಸರಿಪಡಿಸಲು ಅವಕಾಶ ಸಿಗುತ್ತಿತ್ತು. ಮೂರೇ ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಮುಗಿಸಬಹುದಿತ್ತು. ಟೆಂಡರ್ ನಲ್ಲಿ ಭಾಗವಹಿಸಲು ಕಂಪನಿಗಳು ಮುಂದೆ ಬರಲಿಲ್ಲ ಎಂಬ ಸಚಿವರ ಹೇಳಿಕೆ ಗಮನಿಸಿದರೆ ರಾಜ್ಯ ಸರ್ಕಾರದ ಮೇಲೆ ಯಾರಿಗೂ ವಿಶ್ವಾಸವಿಲ್ಲ ಎಂಬುದು ಇದರಿಂದ ಸಾಬೀತಾಗಿದೆ ಎಂದು ತಿಳಿಸಿದ್ದಾರೆ.
ಸುಮ್ಮನೆ ಕಾಲಹರಣವಾಗುತ್ತಿದೆ:ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಸ್ಥೆ ಮತ್ತು ವಿಳಂಬ ಧೋರಣೆ ಅನುಸರಿಸಿರುವ ಸರ್ಕಾರ, ಟೆಂಡರ್ ಕರೆದಾಗಲೇ ಕಾಮಗಾರಿಯ ಕಾಲಮಿತಿಯನ್ನು ನಿಗದಿಪಡಿಸಬೇಕಿತ್ತು. ಸರ್ಕಾರವು ಟೆಂಡರ್ ಪ್ರಕ್ರಿಯೆಯನ್ನೇ ವಿಳಂಬವಾಗಿ ಆರಂಭಿಸಿದೆ. ಗುತ್ತಿಗೆದಾರರು ಹಂಗಾಮು ಆರಂಭವಾದ ಕಾರಣ ಕಾಮಗಾರಿ ಕೈಗೆತ್ತಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಕಳೆದ ವರ್ಷ ಆಗಸ್ಟ್ ನಲ್ಲಿ ೧೯ನೇ ಗೇಟ್ ಮುರಿದುಬಿದ್ದ ನಂತರ, ಬೇಸಿಗೆಯ ಮೂರು ತಿಂಗಳ ಸುವರ್ಣಾವಕಾಶವನ್ನು ಸರ್ಕಾರ ವೈಫಲ್ಯಗೊಳಿಸಿ, ಸುಮ್ಮನೇ ಕಾಲ ಹರಣ ಮಾಡಿ ರೈತರ ಕೃಷಿ ಚಟುವಟಿಕೆಗಳನ್ನು ವ್ಯರ್ಥ ಮಾಡಿದೆ. ಸರಿಯಾದ ಯೋಜನೆ ರೂಪಿಸಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಸರ್ಕಾರ ಮತ್ತು ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವ ಸಚಿವ ಶಿವರಾಜ ತಂಗಡಗಿ ಅವರು, ಇಡೀ ರೈತ ಸಮುದಾಯವನ್ನು ಕತ್ತಲಲ್ಲಿರಿಸಿ ಮೋಜು ನೋಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಬೇಜವಾಬ್ದಾರಿಯ ಪರಮಾವಧಿ:ಸರ್ಕಾರದ ಐಸಿಸಿ ಸಭೆಯ ನಿರ್ಣಯವನ್ನು ನಂಬಿ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಸುಮಾರು ೧೯ ಲಕ್ಷ ಹೆಕ್ಟೇರ್ ಭೂಮಿಯಲ್ಲಿ ರೈತರು ಭತ್ತ, ಹತ್ತಿ, ಜೋಳ, ಮೆಣಸಿನಕಾಯಿಯಂತಹ ಬೆಳೆಗಳನ್ನು ಬಿತ್ತಿದ್ದಾರೆ. ಮಳೆಯಾಶ್ರಯದಲ್ಲಿ ಈಗಾಗಲೇ ಎರಡು ತಿಂಗಳ ಕಾಲ ಬೆಳೆಗಳು ನಿಂತಿವೆ. ಮುಂಗಾರು ಹಂಗಾಮಿನ ಕೊನೆಯ ಹಂತದಲ್ಲಿ ಬೆಳೆಗೆ ನೀರು ಅತ್ಯಗತ್ಯವಾಗಿದೆ. ಈ ಸಮಯದಲ್ಲಿ, “ಗೇಟುಗಳು ಶಿಥಿಲಗೊಂಡಿವೆ’ ಎಂದು ಹೇಳಿ ರೈತರಲ್ಲಿ ಗೊಂದಲ ಮತ್ತು ಆತಂಕ ಸೃಷ್ಟಿಸುತ್ತಿರುವುದು ಸರ್ಕಾರದ ಬೇಜವಾಬ್ದಾರಿತನದ ಪರಮಾವಧಿಯಾಗಿದೆ. ಇದರಿಂದ ನುಣುಚಿಕೊಳ್ಳಲು ಸಚಿವ ತಂಗಡಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ವಿಫಲ ಯತ್ನ ನಡೆಸುತ್ತಿದ್ದಾರೆ.
ನಾಟಕ ನಿಲ್ಲಿಸಿ:ತಮ್ಮ ವೈಫಲ್ಯವನ್ನು ಮರೆಮಾಚಲು, ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದೆ. “ರಾಜ್ಯದ ಕಾರ್ಯದರ್ಶಿ ನೇಮಕಕ್ಕೆ ಕೇಂದ್ರಕ್ಕೆ ೮ ಬಾರಿ ಒತ್ತಾಯ ಮಾಡಿದ್ದೇವೆ” ಎಂಬುದು ಬಾಲಿಶ ಮತ್ತು ಸತ್ಯಕ್ಕೆ ದೂರವಾದ ಮಾತು. ಜಲಾಶಯದ ನಿರ್ವಹಣೆ ಮತ್ತು ಆಡಳಿತಾತ್ಮಕ ಜವಾಬ್ದಾರಿ ಸಂಪೂರ್ಣವಾಗಿ ರಾಜ್ಯ ಸರ್ಕಾರದ್ದಾಗಿದೆ. ಕೇಂದ್ರ ಸರ್ಕಾರದ ಪಾತ್ರ ಕೇವಲ ತಾಂತ್ರಿಕ ಸಲಹೆಗೆ ಸೀಮಿತವಾಗಿರುತ್ತದೆ. ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಚಿವರು ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಜೊತೆ ಸಮಾಲೋಚನೆ ನಡೆಸಿದ್ದಾಗಿ ಹೇಳುತ್ತಿದ್ದಾರೆ. ತಮ್ಮ ಮನೆ ಮುಂದಿನ ವಿದ್ಯುತ್ ಕಂಬ ಬಿದ್ದರೂ ಅದಕ್ಕೆ ಕೇಂದ್ರವೇ ಹೊಣೆ ಎನ್ನುವ ನಾಟಕವನ್ನು ಸಚಿವರು ಮೊದಲು ನಿಲ್ಲಿಸಬೇಕು ಎಂದು ಎಸ್.ಗುರುಲಿಂಗನಗೌಡ ಅವರು ತಿಳಿಸಿದ್ದಾರೆ.