ಬೆಳಗಾವಿ: ಬೆಳಗಾವಿ ಜನತೆಯ ಬಹು ನಿರೀಕ್ಷಿತ ಮೇಲ್ಸೇತುವೆ ಕಾಮಗಾರಿ, ನೂತನ ಜಿಲ್ಲಾಧಿಕಾರಿ ಕಚೇರಿ, ಪತ್ರಿಕಾ ಭವನದ ನೂತನ ಕಟ್ಟಡಕ್ಕೆ ಮುಂಬರುವ ತಿಂಗಳವೇ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡುವವರು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 97ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ, ನಂತರ ಸುದ್ದಿಸಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ನೀರಾವರಿ ಇಲಾಖೆಯಿಂದ 1 ಲಕ್ಷ ಹಕ್ಟೇರ್ ಪ್ರದೇಶಕ್ಕೆ ನೀರು ಕಲ್ಪಿಸುವ ಗುರಿ ಹೊಂದಿದ್ದು, ಕೆರೆ ತುಂಬಿಸುವ ಯೋಜನೆಗೆ ಪ್ರಾಮುಖ್ಯತೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
215 ಕೋಟಿ ರೂ. ವೆಚ್ಚದಲ್ಲಿ ಸವದತ್ತಿ ಯಲ್ಲಮ್ಮ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಂದಾಗಿರುವ ಸರ್ಕಾರ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ. ಸವದತ್ತಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಸಚಿವ ಎಚ್.ಕೆ. ಪಾಟೀಲ್ ಅವರು ವಿಷೇಶ ಕಾಳಜಿ ವಹಿಸಿದ್ದಾರೆ. ಇನ್ನು ನೂತನ ಜಿಲ್ಲಾಧಿಕಾರಿ ಕಟ್ಟಡ ನಿರ್ಮಾಣಕ್ಕಾಗಿ ರೂ.55 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಪತ್ರಿಕಾ ಭವನದ ನೂತನ ಕಟ್ಟಡಕ್ಕೂ ನಮ್ಮ ಇಲಾಖೆಯಿಂದ 10 ಕೋಟಿ ರೂ. ಒದಗಿಸಲು ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಬೆಳಗಾವಿ ಜನತೆಯ ಬುಹು ನೀರಿಕ್ಷಿತ ಒಂದನೇ ಹಂತದ ಫ್ಲೈ ಓವರ್ ಕಾಮಗಾರಿ ಸಂಕಮ್ ಹೋಟೆಲ್ ನಿಂದ ಆರಂಭಗೊಂಡು ಅಶೋಕ ವೃತ್ತ, ಆರ್ ಟಿ ಒ ಸರ್ಕಲ್, ಚನ್ನಮ್ಮ ವೃತ್ತ, ಬೊಗಾರೇಸ್ ಸರ್ಕಲ್‌ಗೆ ಮುಕ್ತಾಯವಾಗುತ್ತದೆ. 4.5 ಕಿ.ಮೀ ವ್ಯಾಪ್ತಿಯ ಮೇಲ್ಸೇತುವೆ ಕಾಮಗಾರಿ ಇದಾಗಿದ್ದು 200 ಕೋಟಿ ರೂಪಾಯಿ ನಮ್ಮ ಇಲಾಖೆಯಿಂದ ವ್ಯಯಿಸಲಾಗುವುದು, ಈ ಕಾಮಗಾರಿಯನ್ನು ಸೆಪ್ಟಂಬರ್ ತಿಂಗಳಲ್ಲಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಇನ್ನು 2013ರಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಚಾಲನೆ ನೀಡಿದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಸೆಪ್ಟಂಬರ್ ತಿಂಗಳಲ್ಲಿ ಪೂರ್ಣಗೊಂಡ ಕಾಮಗಾರಿಗಳನ್ನು ಸಿಎಂ ಸಿದ್ದರಾಮಯ್ಯನವರೇ ಉದ್ಘಾಟಿಸುವವರು ಎಂದ ಸಚಿವರು, ಜಿಲ್ಲಾ ಕ್ರೀಡಾಂಗಣಕ್ಕೂ ವರ್ಷಕ್ಕೆ 10 ಕೋಟಿ ರೂ. ವ್ಯಯಿಸುವ ಮೂಲಕ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗವುದು ಎಂದರು.
ಈ ಸಂದರ್ಭದಲ್ಲಿ ಶಾಸಕ ಆಸೀಪ್ (ರಾಜು) ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೋಲಿಸ್ ಆಯುಕ್ತ ಭೂಷಣ ಗುಲಾಬರಾವ್ ಭೋರಸೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಇದ್ದರು.