ಬೆಂಗಳೂರು: ಒಕ್ಕೂಟ ಸರ್ಕಾರವು ತೆರಿಗೆ ಮುಂತಾದ ಸಂಪನ್ಮೂಲಗಳನ್ನು ಹಂಚುವಾಗ ನಿಷ್ಪಕ್ಷಪಾತದ ಧೋರಣೆ ಅನುಸರಿಸುತ್ತಿಲ್ಲ. ಐಟಿ, ಇ.ಡಿ, ಸಿಬಿಐ ಮತ್ತು ಕೆಲವು ಸಾಂವಿಧಾನಿಕ ಸಂಸ್ಥೆಗಳು ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ನೈಜ ಮೌಲ್ಯಗಳ ಉಳಿವಿಗಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆಕ್ರೋಶವು ವಿವಿಧ ವೇದಿಕೆಗಳಿಂದ ವ್ಯಕ್ತವಾಗುತ್ತಿದೆ. ಈ ಕುರಿತು ಜವಾಬ್ದಾರಿಯುಳ್ಳ ನಾಗರಿಕರೆಲ್ಲ ಧ್ವನಿಯೆತ್ತಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ 79ನೇ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆ ಅಭಿವೃದ್ಧಿ ದಿಕ್ಕು ಬದಲಾಯಿಸುತ್ತಿದೆ: ಗ್ಯಾರಂಟಿ ಯೋಜನೆಗಳು ರಾಜ್ಯದ ಅಭಿವೃದ್ಧಿಯ ದಿಕ್ಕನ್ನೆ ಬದಲಾಯಿಸುತ್ತಿವೆ. 2023ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಆರಂಭಿಸಿದೆವು. ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವನಿಧಿ ಯೋಜನೆಗಳಿಗೆ ಈ ವರೆಗೆ 96,000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ವಿನಿಯೋಗಿಸಿದ್ದೇವೆ. ಶಕ್ತಿ ಯೋಜನೆಯಲ್ಲಿ 500 ಕೋಟಿ ಟ್ರಿಪ್ಗಳ ಮೂಲಕ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದನ್ನು ಇತ್ತೀಚೆಗೆ ಆಚರಣೆ ಮಾಡಿದ್ದೇವೆ ಎಂದರು.
ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಜನರಿಗೆ ತಲುಪುವ ಈ ಯೋಜನೆಗಳು ರಾಜ್ಯದ ಜನರ ತಲಾದಾಯವನ್ನು ಹೆಚ್ಚಿಸುತ್ತಿರುವುದಲ್ಲದೆ ಕಾರ್ಮಿಕ ಶಕ್ತಿಯಲ್ಲಿಮಹಿಳೆಯರ ಭಾಗವಹಿಸುವಿಕೆಯನ್ನು ಶೇ.23ರಷ್ಟು ಹೆಚ್ಚಿಸಿವೆ ಎಂದು ಹಲವು ಅಧ್ಯಯನಗಳು ಹೇಳುತ್ತಿವೆ. ನಾವು ಶಕ್ತಿ ಯೋಜನೆಯನ್ನು ಜಾರಿಗೊಳಿಸುವುದರ ಜೊತೆಗೆ ಸಾರಿಗೆ ಇಲಾಖೆಗೆ ವಿವಿಧ ಮಾದರಿಯ ವಾಹನಗಳು ಸೇರಿದಂತೆ ಒಟ್ಟು 5,049 ಹೊಸ ಬಸ್ಸುಗಳ ಖರೀದಿ ಮತ್ತು 8,473 ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದೇವೆ ಎಂದು ಹೇಳಿದರು.