ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್, ಪವಿತ್ರಾ ಗೌಡ ಮತ್ತು ಇತರರಿಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಪೂರ್ಣಗೊಂಡಿದ್ದು, ಇಂದು ಅರ್ಜಿಯ ತೀರ್ಪು ಪ್ರಕಟವಾಗಿದೆ. ನಟ ದರ್ಶನ್, ನಟಿ ಪವಿತ್ರಾಗೌಡ ಸೇರಿ 7 ಜನರ ಜಾಮೀನು ರದ್ದಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಬಳಿಕ 2024ರ ಜೂನ್ 11ರಂದು ನಟ ದರ್ಶನ್, ಪವಿತ್ರಾ ಗೌಡ ಸೇರಿ ಹಲವರು ಬಂಧನಕ್ಕೊಳಗಾದರು. ಹತ್ಯೆ ಆರೋಪ ಹೊತ್ತ ನಟ ದರ್ಶನ್ ಮತ್ತು ತಂಡ ಹಲವು ತಿಂಗಳು ಸೆರೆಮನೆವಾಸ ಅನುಭವಿಸಬೇಕಾಯಿತು. ನಂತರ ವೈದ್ಯಕೀಯ ಆಧಾರದ ಮೇಲೆ ಜಾಮೀನು ದೊರಕಿತ್ತು. ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ದರ್ಶನ್ ತೂಗುದೀಪ ಅವರಿಗೆ ನೀಡಲಾಗಿರುವ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ”ಜನಪ್ರಿಯತೆ, ಅಧಿಕಾರ ಅಥವಾ ಸವಲತ್ತು ಏನೇ ಇರಲಿ, ಕಾನೂನಿನೆದುರು ಎಲ್ಲರೂ ಸಮಾನರು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಡಿಸೆಂಬರ್ 13, 2024ರಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶ ರದ್ದಾಗಿದೆ. ಕಳೆದ ತಿಂಗಳು, ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಪೀಠ ಆದೇಶವನ್ನು ಕಾಯ್ದಿರಿಸಿತ್ತು. ಸುಪ್ರೀಂ ಕೋರ್ಟ್ನ ನ್ಯಾ. ಜೆ.ಬಿ. ಪರ್ದಿವಾಲಾ, ನ್ಯಾ. ಆರ್. ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠದಿಂದ ಈ ಆದೇಶ ಹೊರಬಿದ್ದಿದೆ. ಪರಿಣಾಮ, ದರ್ಶನ್ ಮತ್ತೆ ಜೈಲು ಸೇರಲಿದ್ದಾರೆ. ಇದು ಅವರ ವೃತ್ತಿಜೀವನದ ಮೇಲೆ ಭಾರಿ ಪರಿಣಾಮ ಬೀರಲಿದೆ.
ಹೈಕೋರ್ಟ್‌ನ ಆದೇಶವು ಗಂಭೀರ ಕಾನೂನು ದೌರ್ಬಲ್ಯಗಳಿಂದ ಕೂಡಿದೆ. ಜಾಮೀನು ನೀಡಲು ಯಾವುದೇ ವಿಶೇಷ ಕಾರಣವನ್ನು ದಾಖಲಿಸುವಲ್ಲಿ ಆದೇಶವು ವಿಫಲವಾಗಿದೆ ಎಂದು ಪೀಠ ಹೇಳಿದೆ. ಹೈಕೋರ್ಟ್ ಆದೇಶವು ಕಾನೂನುಬದ್ಧವಾಗಿ ಸಂಬಂಧಿಸಿದ ಸಂಗತಿಗಳನ್ನು ಬಿಟ್ಟುಬಿಟ್ಟಿದೆ ಎಂದು ಸುಪ್ರೀಂ ತಿಳಿಸಿದೆ. “ಅಪರಾಧದ ಸ್ವರೂಪ, ಆರೋಪಿಯ ಪಾತ್ರ ಮತ್ತು ವಿಚಾರಣೆಯಲ್ಲಿ ಹಸ್ತಕ್ಷೇಪದ ಸ್ಪಷ್ಟ ಪರಿಣಾಮ/ಅಪಾಯವನ್ನು ಪರಿಗಣಿಸದೇ ಇಂತಹ ಗಂಭೀರ ಪ್ರಕರಣದಲ್ಲಿ ಜಾಮೀನು ನೀಡುವುದು ಸಂಪೂರ್ಣವಾಗಿ ಅನಗತ್ಯ ವಿವೇಚನೆಯ ಕ್ರಮ” ಎಂದು ನ್ಯಾಯಪೀಠದ ಪರವಾಗಿ ತೀರ್ಪು ನೀಡುತ್ತಾ ನ್ಯಾಯಮೂರ್ತಿ ಮಹಾದೇವನ್ ಅವರು ತಿಳಿಸಿದರು.