ಧಾರವಾಡ : ಗ್ರಾಮೀಣ ಭಾಗದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಗ್ರಾಮ ಪಂಚಾಯತ ಅಧಿಕಾರಿಗಳು ಶ್ರಮಿಸಬೇಕು. ವೈಯಕ್ತಿಕ ಶೌಚಾಲಯಗಳನ್ನು ಹೊಂದಲು ಫಲಾನುಭವಿಗಳಿಗೆ ಪ್ರೋತ್ಸಾಹಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು.
ಧಾರವಾಡ ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳ ಕುರಿತು ಧಾರವಾಡ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ವಸತಿ ಯೋಜನೆ, ತೆರಿಗೆ ವಸೂಲಾತಿ, ಕೂಸಿನ ಮನೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯನಿರ್ವಹಣೆಯ ಕುರಿತು ಪ್ರಗತಿ ಪರಿಶೀಲನೆ ಮಾಡಿದರು. ಸಮರ್ಪಕವಾಗಿ ಮತ್ತು ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸಲು ಅವರು ಸೂಚಿಸಿದರು.
ಸ್ವಚ್ಚ ಭಾರತ ಮಿಷನ್ (ಗ್ರಾ) ಯೋಜನೆಯಡಿ ವೈಯಕ್ತಿಕ ಶೌಚಾಲಯದ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಅವರು ತಿಳಿಸಿದರು.
ತಾಲ್ಲೂಕಿನಲ್ಲಿ ಗ್ರಂಥಾಲಯ ಉಪ ಕರ ವಸೂಲಾತಿ ಪ್ರಗತಿ ಕುಂಠಿತವಾಗಿದ್ದು, ಪ್ರತಿ ತಿಂಗಳು ಶೇ.10 ರಷ್ಟು ಗುರಿ ನಿಗದಿಪಡಿಸಿಕೊಂಡು ಪ್ರಗತಿ ಸಾಧಿಸಬೇಕು ಮತ್ತು ಐಪಿಜಿಆರ್‍ಎಸ್-ಇ-ಗ್ರಾಮಸ್ವರಾಜ್ ತಂತ್ರಾಂಶದಲ್ಲಿ ಅನುಮೋದಿತ ಕ್ರಿಯಾ ಯೋಜನೆಯನ್ನು ಅಳವಡಿಸಬೇಕು. ಅಗತ್ಯವಿರುವಲ್ಲಿ ಹೊಸ ಕೂಸಿನ ಮನೆ ಪ್ರಾರಂಭಿಸಲು ಪಿಡಿಒಗಳಿಗೆ ಅವರು ತಿಳಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದಂತೆ 2025-26 ನೇ ಸಾಲಿನ ವಾರ್ಷಿಕ ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸದೇ ಕನಿಷ್ಟ ಪ್ರಗತಿ ಸಾಧಿಸಿರುವ ಗ್ರಾಮ ಪಂಚಾಯತಿಗಳ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಕೂಲಿಕಾರರಿಗೆ ಸ್ಥಳೀಯವಾಗಿ ಕೆಲಸ ಒದಗಿಸಿ ಪ್ರಗತಿ ಸಾಧಿಸಬೇಕು ಮತ್ತು ಮಹಿಳಾ ಭಾಗವಹಿಸುವಿಕೆ ಪ್ರಮಾಣವನ್ನು ಸರಕಾರದಿಂದ ನಿಗದಿಪಡಿಸಿದ ಶೇ.50 ರಷ್ಟು ಗುರಿ ಸಾಧಿಸಲು ಹಾಗೂ ಬೂದು ನೀರು ನಿರ್ವಹಣೆ ಕಾಮಗಾರಿಗಳ ಡಿಪಿಆರ್‍ಗಳನ್ನು ತಯಾರಿಸಿ ಸಲ್ಲಿಸಲು ಮತ್ತು ಜಿಲ್ಲೆಯಲ್ಲಿ ದಾಖಲಾಗಿರುವ ಸಾಮಾಜಿಕ ಲೆಕ್ಕ ಪರಿಶೋಧನಾ ಆಕ್ಷಪಣೆ ಮತ್ತು ವಸೂಲಾತಿ ಮಾಡಿ ಇತ್ಯರ್ಥ ಪಡಿಸಬೇಕು ಎಂದು ಜಿಲ್ಲಾ ಪಂಚಾಯತ ಸಿಇಓ ಅವರು ಹೇಳಿದರು.
ಸಭೆಯಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಚಂದ್ರು ಪೂಜಾರ, ತಾಲೂಕಾ ಯೋಜನಾಧಿಕಾರಿಗಳು, ತಾಲೂಕಾ ಲೆಕ್ಕಾಧಿಕಾರಿಗಳು, ಎಲ್ಲ ಗ್ರಾಮ ಪಂಚಾಯತಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ನರೇಗಾ ಅನುಷ್ಠಾನ ಕುರಿತು ಹಾಜರಿದ್ದರು.