ನವದೆಹಲಿ, ಆಗಸ್ಟ್ 12: ಭಾರತಕ್ಕೆ ಬಹಳ ದೊಡ್ಡ ಮಾರುಕಟ್ಟೆ ಎನಿಸಿದ್ದ ಅಮೆರಿಕ ಈಗ ಟ್ಯಾರಿಫ್ ತಡೆಗೋಡೆ ನಿರ್ಮಿಸಿದೆ. ಇದರಿಂದ ಕುಸಿಯಬಹುದಾದ ರಫ್ತನ್ನು ಸರಿದೂಗಿಸಲು ಸರ್ಕಾರ ಸಕಲ ಮಾರ್ಗೋಪಾಯಗಳನ್ನು ಹುಡುಕುತ್ತಿದೆ. ವರದಿಗಳ ಪ್ರಕಾರ ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ಪ್ರದೇಶಗಳಲ್ಲಿನ ಸುಮಾರು 50 ದೇಶಗಳ ಮೇಲೆ ಸರ್ಕಾರ ಗಮನ ಹರಿಸಿದೆ.
ವಾಣಿಜ್ಯ ಸಚಿವಾಲಯ ಈಗಾಗಲೇ 20 ದೇಶಗಳ ಬಗ್ಗೆ ಗಮನ ಹರಿಸಿದೆ. ಈಗ ಇನ್ನೂ 30 ದೇಶಗಳನ್ನು ಸೇರಿಸಲಾಗಿದೆ. ರಫ್ತು ವಿಚಾರದಲ್ಲಿ ಭಾರತವು ನಾಲ್ಕು ಅಂಶಗಳ ಕಾರ್ಯಸೂಚಿ ಹಾಕಿಕೊಂಡಿದೆ. ರಫ್ತಾಗುವ ಉತ್ಪನ್ನಗಳ ಸಂಖ್ಯೆ ಹೆಚ್ಚಿಸುವುದು, ರಫ್ತಿನ ಸ್ಪರ್ಧಾತ್ಮಕತೆ ಹೆಚ್ಚಿಸುವುದು ಇವು ಸರ್ಕಾರದ ಪ್ರಾಮುಖ್ಯತೆಗಳ ಪೈಕಿ ಇದೆ.
2025ರ ಜೂನ್ ತಿಂಗಳಲ್ಲಿ ಭಾರತದ ಒಟ್ಟಾರೆ ಸರಕುಗಳ ರಫ್ತು 35.14 ಬಿಲಿಯನ್ ಡಾಲರ್ ಇತ್ತು. ಜಾಗತಿಕ ಆರ್ಥಿಕ ಅನಿಶ್ಚಿತ ಸ್ಥಿತಿಯಿಂದಾಗಿ ಮಾಮೂಲಿಗಿಂತ ಕಡಿಮೆ ರಫ್ತು ಜೂನ್ನಲ್ಲಿ ದಾಖಲಾಗಿತ್ತು. ರಫ್ತು ಮಾತ್ರವಲ್ಲ, ಆಮದು ಕೂಡ ಕಡಿಮೆ ಆಗಿತ್ತು. ಇದರಿಂದ ಟ್ರೇಡ್ ಡೆಫಿಸಿಟ್ ಅಥವಾ ವ್ಯಾಪಾರ ಕೊರತೆ 18.78 ಬಿಲಿಯನ್ ಡಾಲರ್ಗೆ ಇಳಿದಿತ್ತು. ಇದು ನಾಲ್ಕು ತಿಂಗಳಲ್ಲೇ ಕಡಿಮೆ ಟ್ರೇಡ್ ಡೆಫಿಸಿಟ್ ಎನಿಸಿದೆ.