ಹುಬ್ಬಳ್ಳಿ, ಆಗಸ್ಟ್ 12: ಸ್ವಾತಂತ್ರ್ಯೋತ್ಸವ ಬಂತೆಂದರೆ ಸಾಕು. ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ದೇಶದ ಏಕೈಕ ಬಿಐಎಸ್ ಪ್ರಮಾಣೀಕೃತ ಖಾದಿ ತ್ರಿವರ್ಣ ಧ್ವಜ ತಯಾರಿಕಾ ಕೇಂದ್ರ ಸದಾ ಗಜಿಬಿಜಿಯಿಂದ ಕೂಡಿರುತ್ತದೆ. ಮಹಿಳಾ ಉದ್ಯೋಗಿಗಳು ರಾಷ್ಟ್ರಧ್ವಜ ಹೊಲಿಯುವ ಕೆಲಸದಲ್ಲಿ ವ್ಯಸ್ತರಾಗಿರುತ್ತಾರೆ. ಆದರೆ, ಈ ವರ್ಷ ಸ್ವಾತಂತ್ರ್ಯೋತ್ಸವಕ್ಕೆ ಇನ್ನು ಬೆರಳೆಣಿಕೆ ದಿನ ಇದ್ದರೂ ಎಂದಿನ ಉತ್ಸಾಹ ಕಾಣಿಸುತ್ತಿಲ್ಲ. ಕಾರ್ಮಿಕರ ಸಂಖ್ಯೆಯೂ ಕಡಿಮೆಯಾಗಿದೆ. ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಲಾಭದಲ್ಲಿ ಈ ವರ್ಷ ಶೇ 75 ರಷ್ಟು ಕುಸಿತವಾಗಿದೆ. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಸಂಘವು ಸುಮಾರು 2.7 ಕೋಟಿ ರೂ. ಗಳಿಸುತ್ತಿತ್ತು. ಆದರೆ ಈ ವರ್ಷ ಕೇವಲ 49 ಲಕ್ಷ ರೂ. ಮೌಲ್ಯದ ಆರ್ಡರ್ಗಳನ್ನು ಪಡೆದುಕೊಂಡಿದೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ಧ್ವಜ ಸಂಹಿತೆಗೆ ತಿದ್ದುಪಡಿ ತಂದ ಬಳಿಕ ಅನೇಕ ಸರ್ಕಾರಿ ಕಟ್ಟಡಗಳು ಮತ್ತು ಸಂಸ್ಥೆಗಳು ಸಹ ಪಾಲಿಸ್ಟರ್ ಧ್ವಜಗಳನ್ನು ಹಾರಿಸಲು ಪ್ರಾರಂಭಿಸಿವೆ. ಮತ್ತೊಂದೆಡೆ, ಖಾದಿ ಧ್ವಜಗಳ ಬೆಲೆ ಹೆಚ್ಚಾಗಿದ್ದು, ಇದೂ ಸಹ ಅವುಗಳನ್ನು ಜನ ದೂರವಿಡಲು ಕಾರಣವಾಗಿದೆ. ಖಾದಿ ಧ್ವಜಗಳು ದೀರ್ಘಾವಧಿ ಬಾಳಿಕೆ ಬರುವಂಥದ್ದಾಗಿದ್ದರೂ, ಅವು ಬೇಡಿಕೆಯನ್ನು ಶೀಘ್ರವಾಗಿ ಕಳೆದುಕೊಳ್ಳುತ್ತಿವೆ.