ಬೆಂಗಳೂರು: ಮುಂಗಾರು ಅಧಿವೇಶನದ ಎರಡನೇ ದಿನವಾದ ಇಂದು ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಸಚಿವ ಸ್ಥಾನದಿಂದ ವಜಾಗೊಂಡಿರುವ ಕೆ. ಎನ್. ರಾಜಣ್ಣ ಅವರ ವಿಷಯ ಪ್ರಸ್ತಾಪವಾಯಿತು.
ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಸಹಕಾರ ಸಚಿವರಾಗಿದ್ದ ಕೆ. ಎನ್. ರಾಜಣ್ಣ ಅವರು ಸಚಿವ ಸ್ಥಾನದಿಂದ ವಜಾಗೊಂಡಿರುವ ಕುರಿತ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಸಹಿಯಿರುವ ಪತ್ರ ಓದಲು ಮುಂದಾದರು. ಇದಕ್ಕೆ ಆಡಳಿತ ಪಕ್ಷದ ಸಚೇತಕ ಸಲೀಂ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಪ್ರಶೋತ್ತರ ಅವಧಿ ಮುಗಿದ ಬಳಿಕ ಮಾತನಾಡಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಸೂಚಿಸಿದರು. ತುರ್ತು ವಿಷಯವಾಗಿದ್ದು, ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಯಾಕೆ ವಜಾ ಮಾಡಿದರು ಎಂದು ಛಲವಾದಿ ನಾರಾಯಣ ಪ್ರಶ್ನಿಸಿದರು. ಇದಕ್ಕೆ ಬಿಜೆಪಿ ಸದಸ್ಯರಾದ ಸಿ. ಟಿ. ರವಿ. ರವಿಕುಮಾರ್ ಸೇರಿದಂತೆ ಇನ್ನಿತರ ಸದಸ್ಯರು ಧ್ವನಿಗೂಡಿಸಿದರು.
ವಿಪಕ್ಷ ಸದಸ್ಯರ ಮಾತಿಗೆ ವಿರೋಧಿಸಿದ ಆಡಳಿತ ಪಕ್ಷದ ನಾಯಕರು, ರಾಜಣ್ಣ ಅವರ ಮೇಲೆ ಯಾವತ್ತಿನಿಂದ ಪ್ರೀತಿ ಬಂತು ಎಂದು ವ್ಯಂಗ್ಯವಾಡಿದರು. ಮಾತಿನ ಚಕಮಕಿ ಹೆಚ್ಚಾಗುತ್ತಿದ್ದಂತೆ 10 ನಿಮಿಷ ಕಲಾಪವನ್ನು ಸಭಾಪತಿ ಅವರು ಮುಂದೂಡಿದರು.
ಸಭಾನಾಯಕರು ಬಂದ ಬಳಿಕ ಉತ್ತರ: ಸದನ ಮತ್ತೆ ಆರಂಭವಾಗುತ್ತಿದ್ದಂತೆ ರಾಜಣ್ಣ ಅವರನ್ನು ವಜಾಗೊಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ವಜಾಗೊಳಿಸಲು ಕಾರಣವೇನು? ಭ್ರಷ್ಟಾಚಾರದಲ್ಲಿ ಅವರು ತೊಡಗಿಸಿಕೊಂಡಿದ್ದಾರೆಯೇ ಎಂದು ಛಲವಾದಿ ಅವರು ಪ್ರಶ್ನಿಸಿದರು. ಮುಖ್ಯಮಂತ್ರಿಗಳಿಂದ ಅಥವಾ ಸಭಾ ನಾಯಕರಿಂದ ಉತ್ತರ ಕೊಡಿಸಿ ಎಂದು ಪಟ್ಟು ಹಿಡಿದರು. ಸಭಾ ನಾಯಕರು ಸದನಕ್ಕೆ ಬಂದಿಲ್ಲ. ಬಂದ ಬಳಿಕ ಅವರಿಂದ ಉತ್ತರ ಕೊಡಿಸಲಾಗುವುದು ಸಭಾಪತಿ ಅವರು ಭರವಸೆ ನೀಡಿದ್ದರಿಂದ ವಿಪಕ್ಷ ನಾಯಕರು ಸುಮ್ಮನಾದರು.