ಸಂಯಮಶೀಲ ಬದುಕಿನಿಂದ ಆತ್ಮೋನ್ನತಿಯ ಶ್ರೇಯಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು. ತಾಲೂಕಿನ ಹಾರಕೂಡ ಶ್ರೀಮಠದ ಶ್ರೀ ಚನ್ನ ರೇಣುಕ ಬಸವ ಮಂಟಪದಲ್ಲಿ ಶ್ರಾವಣ ಮಾಸದ ಮಧ್ಯ ಸೋಮವಾರ ಅಂಗವಾಗಿ ಜರುಗಿದ ಧರ್ಮ ಸಭೆ ಉದ್ಘಾಟಿಸಿ ಮಾತನಾಡಿದ ಶ್ರೀಗಳು ಶ್ವೇಚ್ಚಾಚಾರವಿಲ್ಲದ ವಿವೇಕ ಸಹಿತವಾದ ನೆಮ್ಮದಿಯ ಬದುಕು ಸಾಗಿಸಲು ದಿವ್ಯತೆಯ ಭಾವ ಅರಳಲು ಶ್ರಾವಣ ಮಾಸ ಅದ್ಭುತ ಸನ್ನಿವೇಶ ಒದಗಿಸಿಕೊಡುತ್ತದೆ. ಅಂತರಂಗದ ಕಲಹ, ದುಗುಡ, ತಳಮಳಗಳು ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಇವುಗಳಿಂದ ಹೊರಬರಲು ಸತ್ಸಂಗ, ಸದಾಚಾರ, ಸದ್ಭಾವಗಳ ನೆಲೆಯಲ್ಲಿ ಪೂರ್ಣತೆಯಡೆಗೆ ಹೆಜ್ಜೆ ಹಾಕಲು ಶ್ರಾವಣ ಮಸ ಅತ್ಯಂತ ಪ್ರಶಸ್ತ ಕಾಲವಾಗಿದೆ. ಹಾಗಾಗಿ ಭಜನೆ, ಕೀರ್ತನೆ, ಪ್ರವಚನ ಇತ್ಯಾದಿಗಳ ಮುಖೇನ ಮನದ ಭಾರ ಕಳಚಿ ಸಹಜ ಸುಂದರ ಬಾಳ್ವೆಗೆ ಅಣಿಯಾಗಬೇಕೆನ್ನುವುದೇ ನಮ್ಮ ಆಶಯವಾಗಿದೆ ಎಂದು ನುಡಿದರು.
ಸೇರಿರುವ ಎಲ್ಲ ಭಕ್ತರ ಕಷ್ಟ ಕಳೆದು ಸಾತ್ವಿಕ ಇಷ್ಟಾರ್ಥ ಲಭಿಸುವಂತೆ ಲಿಂಗೈಕ್ಯ ಚನ್ನಬಸವ ಶಿವಯೋಗಿಗಳು ಅನುಗ್ರಹ ಕರುಣಿಸಲಿ ಎಂದು ಶುಭ ಹಾರೈಸಿದರು.ಮಲ್ಲಿನಾಥ ಹಿರೇಮಠ ಹಾರಕೂಡ ಸ್ವಾಗತಿಸಿದರು.
ಜಿಲ್ಲಾ ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿಗಳಾದ ಬಿ.ಕೆ. ಹಿರೇಮಠ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಪ್ರತ್ವಿರಾಜ ದೇಗಾಂವ, ಪಂಡಿತರಾವ ದೇಗಾಂವ, ಸಿದ್ರಾಮ ಹೆಗಡೆ, ಚನ್ನಪ್ಪ ದಾಮಾ ಉಪಸ್ಥಿತರಿದ್ದರು.
ವಿಠಲ ಹೂಗಾರ ನಿರೂಪಣೆ ಮಾಡಿದರು.ವಿಜಯಕುಮಾರ ಕುಲಕರ್ಣಿ ವಂದಿಸಿದರು.ಕಾರ್ಯಕ್ರಮದ ನಂತರ ರಾತ್ರಿವಿಡಿ ವಿವಿಧ ಗ್ರಾಮಗಳಿಂದ ಆಗಮಿಸಿದ 29 ಭಜನಾ ತಂಡದವರಿಂದ ಭಜನೆ ಕಾರ್ಯಕ್ರಮ ಜರುಗಿತು.ಚಿತ್ರ : ಶ್ರಾವಣ ಮಾಸದ ಅಂಗವಾಗಿ ಹಾರಕೂಡ ಶ್ರೀಮಠದ ಶ್ರೀ ಚನ್ನ ರೇಣುಕ ಬಸವ ಮಂಟಪದಲ್ಲಿ ಆಯೋಜಿಸಿದ ಧರ್ಮ ಸಭೆಯನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಜಿಲ್ಲಾ ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿಗಳಾದ ಬಿ.ಕೆ. ಹಿರೇಮಠ, ಮಲ್ಲಿನಾಥ ಹಿರೇಮಠ ಹಾರಕೂಡ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಪಂಡಿತರಾವ ದೇಗಾಂವ, ವಿಜಯಕುಮಾರ ಕುಲಕರ್ಣಿ, ಸಿದ್ರಾಮ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.