ರಾಮದುರ್ಗ: ಜುಡೋ ಕೇವಲ ಕ್ರೀಡೆಯಷ್ಟೆ ಅಲ್ಲ, ತಾಳ್ಮೆ, ಶಿಸ್ತು, ಆತ್ಮವಿಶ್ವಾಸ ಮತ್ತು ಸಂಘಟನೆಯನ್ನು ಕಲಿಸುವ ಕಲೆಯೂ ಕೂಡಾ ಆಗಿದೆ. ನಮ್ಮ ಶಾಲೆಯ ಹಲವು ವಿದ್ಯಾರ್ಥಿಗಳು ಈಗ ಜುಡೊನಲ್ಲಿ ತೀವೃ ಆಸಕ್ತಿ ತೋರಿಸುತ್ತಿದ್ದು, ಜಿಲ್ಲೆ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಭವಿಷ್ಯದಲ್ಲಿ ರಾಷ್ಟ್ರಮಟ್ಟದ ಸಾಧನೆಯ ನಿರೀಕ್ಷೆಯೂ ಇದೆ ಎಂದು ಸ್ಪೋಕೊ ಸಂಸ್ಥೆಯ ಅಧ್ಯಕ್ಷೆ ಮೃಣಾಲಿನಿ ಎಂ. ಪಟ್ಟಣ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ಜುಡೋ ಸಂಸ್ಥೆ ಬೆಂಗಳೂರು ಹಾಗೂ ಸ್ಪೋಕೊ ಸಂಸ್ಥೆ ಚಂದರಗಿ ಸಹಯೋಗದಲ್ಲಿ ತಾಲೂಕಿನ ಚಂದರಗಿ ಕ್ರೀಡಾ ಶಾಲೆಯಲ್ಲಿ ಬಾಲಕ ಮತ್ತು ಬಾಲಕಿಯರಿಗಾಗಿ ಹಮ್ಮಿಕೊಂಡ ೪೨ನೇ ಕರ್ನಾಟಕ ರಾಜ್ಯ ಸಬ್ ಜ್ಯೂನಿಯರ್ ಮತ್ತು ಮಿನಿ ಕ್ಯಾಟಗರಿ ಜುಡೋ ಚಾಂಪಿಯನ್ಶಿಫ್-೨೦೨೫ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡಾಪಟುಗಳು ಯಾವಾಗಲು ಆರೋಗ್ಯ ಮತ್ತು ಸಧೃಡ ಕಾಯವನ್ನು ಹೊಂದಿರುತ್ತಾರೆ. ಸಧೃಡ ವ್ಯಕ್ತಿಗಳಿಂದ ಮಾತ್ರ ಸಮಾಜ ನಿರ್ಮಾಣ ಸಾಧ್ಯ. ಇದನ್ನು ಮನಗೊಂಡ ಎಸ್.ಎಂ. ಕಲೂತಿ ಅವರು ೧೯೮೩ ರಲ್ಲಿ ಸ್ಪೋಕೋ ಸಂಸ್ಥೆಯನ್ನು ಪ್ರಾರಂಭಿಸಿದ್ದು, ದೇಶಕ್ಕೆ ನೂರಾರು ಉತ್ತಮ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದೆ ಎಂದು ಅವರು ಹರ್ಷವ್ಯಕ್ತಪಡಿಸಿದರು.
ನಮ್ಮ ಸಂಸ್ಥೆ ಖೇಲೋ ಇಂಡಿಯಾ ಯೋಜನೆಯ ಅಡಿಯಲ್ಲಿ ಸೈಕ್ಲಿಂಗ್, ಕುಸ್ತಿ, ಅಥ್ಲೆಟಿಕ್ಸ ಮತ್ತು ಖೋಖೋ ಗಳಲ್ಲಿ ಮಾನ್ಯತೆ ಪಡೆದಿದೆ. ಪ್ರಸಕ್ತ ವರ್ಷದ ನವೀಕರಣಕ್ಕಾಗಿ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
———————————————-
ಬಾಕ್ಸ್:
ಸ್ವಾತಂತ್ರ್ಯ ಹೋರಾಟಗಾರರಾದ ನಮ್ಮ ತಂದೆ ದಿ. ಡಾ. ಮಹಾದೇವಪ್ಪ ಪಟ್ಟಣ ಪುಟ್ಟಬಾಲ್ ಕ್ರೀಡಾಪಟು ಕೂಡಾ ಆಗಿದ್ದರು. ಸಹೋದರ ಶಾಸಕ ಅಶೋಕ ಪಟ್ಟಣ ಹಾಗೂ ತಾವು ಕೂಡಾ ಈಜುಪಟುಗಳಾಗಿದ್ದು, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ನಾವಿಬ್ಬರೂ ರಾಜ್ಯವನ್ನು ಪ್ರತಿನಿಧಿಸಿ ಭಾಗವಹಿಸಿದ್ದೇವು. ನನಗೆ ಈಜು ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದ ಕ್ಷಣವನ್ನು ಸ್ಮರಿಸಿಕೊಂಡರು.
(ಮೃಣಾಲಿನಿ ಪಟ್ಟಣ ಅಧ್ಯಕ್ಷರು, ಸ್ಪೋಕೊ ಸಂಸ್ಥೆ.)
———————————————
ಕರ್ನಾಟಕ ಜುಡೋ ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಅಜಯಕುಮಾರ್ ಸರನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಜುಡೋ ಕ್ರೀಡೆಯನ್ನು ಪರಿಚಯಿಸಲು ಗ್ರಾಮೀಣ ಭಾಗದಲ್ಲಿಯೇ ರಾಜ್ಯಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸ್ಪೋಕೊ ಸಂಸ್ಥೆಯ ಸಂಸ್ಥಾಪಕ ಎಸ್.ಎಂ.ಕಲೂತಿ, ಉಪಾಧ್ಯಕ್ಷ ಮಹೇಶ ಭಾತೆ, ಜಿಲ್ಲಾ ಜುಡೋ ಸಂಸ್ಥೆಯ ಗೌರವ ಕಾರ್ಯದರ್ಶಿ ವಿಕ್ರಮ ಕದಂ ಪಾಟೀಲ, ಆರ್.ಎ.ಪಾಟೀಲ, ರಾಜೇಶ್ವರಿ ಯಾದವಾಡ, ಕೆ.ಎಸ್.ಉಮರಾಣಿ, ಎಸ್.ಜಿ. ಮಡಿವಾಳ, ಎಸ್.ಆರ್. ನವರಕ್ಕಿ, ಎಸ್.ಆರ್.ಮೇತ್ರಿ, ಪೃತ್ವಿರಾಜ ಜಾಧವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜುಡೋ ಕಾರ್ಯದರ್ಶಿ ಎಸ್.ಆರ್. ಶಿವಾನಂದ ಸ್ವಾಗತಿಸಿದರು. ಶಿವಂ ಜೋಶಿ ನಿರೂಪಿಸಿದರು. ದೇವಾಶ್ವರಿ ಕದಂ ವಂದಿಸಿದರು.
