ರಾಜ್ಯದಲ್ಲಿ 5 ದಿನಗಳು ಭಾರೀ ಮಳೆ ; ಯಲ್ಲಮ್ಮನ ಗುಡ್ಡ ಭಾರೀ ಮಳೆಗೆ ಗಢಗಢ

Ravi Talawar
ರಾಜ್ಯದಲ್ಲಿ 5 ದಿನಗಳು ಭಾರೀ ಮಳೆ ; ಯಲ್ಲಮ್ಮನ ಗುಡ್ಡ ಭಾರೀ ಮಳೆಗೆ ಗಢಗಢ
WhatsApp Group Join Now
Telegram Group Join Now

ಬೆಳಗಾವಿ: ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಸವದತ್ತಿ ತಾಲೂಕಿನ ಉಗರಗೋಳ–ಯಲ್ಲಮ್ಮನಗುಡ್ಡ ಮಾರ್ಗದಲ್ಲಿನ ಹಳ್ಳ ಉಕ್ಕಿ ಹರಿದ ಪರಿಣಾಮ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಜಲದಿಗ್ಬಂಧನವಾಗಿದೆ. ದೇವಿ ದರ್ಶನಕ್ಕೆ ಬಂದಿದ್ದ ಭಕ್ತರು ಪರದಾಡಿದ್ದಾರೆ.

ಹೌದು, ಆಗಸ್ಟ್‌ 9ರಂದು ಯಲ್ಲಮ್ಮನಗುಡ್ಡದಲ್ಲಿ ನೂಲು ಹುಣ್ಣಿಮೆ ಹಿನ್ನೆಲೆ ಜಾತ್ರೆ ನಡೆಯಲಿದ್ದು, ದೇವಿ ದರ್ಶನಕ್ಕೆ ಶುಕ್ರವಾರ ಸಂಜೆಯಿಂದಲೇ ಗದಗ, ಕೊಪ್ಪಳ, ಬಾಗಲಕೋಟೆ, ವಿಜಯಪುರ ಸೇರಿ ವಿವಿಧ ಜಿಲ್ಲೆಗಳಿಂದ ಉಗರಗೋಳ ಮಾರ್ಗವಾಗಿ ಗುಡ್ಡಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದರು.

ಶುಕ್ರವಾರ ಮಧ್ಯಾಹ್ನ 3 ಗಂಟೆಯಿಂದ ಸತತವಾಗಿ ಎರಡೂವರೇ ಗಂಟೆ ಭಾರಿ ಮಳೆ ಆದ ಪರಿಣಾಮ ಇಲ್ಲಿನ ಹಳ್ಳ ಉಕ್ಕಿ ಹರಿದಿದೆ. ಯಲ್ಲಮ್ಮ ದೇವಸ್ಥಾನಕ್ಕೆ ನೀರು ನುಗ್ಗಿದೆ. ಇಲ್ಲಿನ ಎಣ್ಣೆಹೊಂಡ ನಡುಗಡ್ಡೆಯಾಗಿದ್ದು, ಓರ್ವ ವ್ಯಕ್ತಿ ಸಿಲುಕಿಕೊಂಡಿದ್ದ. ಅಲ್ಲದೇ ದೇವಸ್ಥಾನದ ಕೌಂಟರ್ ಒಳಗೂ ಭಾರಿ ಪ್ರಮಾಣದ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಯಲ್ಲಮ್ಮನ ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉಗರಗೋಳ ರಸ್ತೆ ಸಂಪೂರ್ಣ ಬಂದ್ ಆಗಿದೆ. ಹಳ್ಳದ ಎರಡೂ ಬದಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಚಾರ ಸ್ಥಗಿತಗೊಂಡ ಪರಿಣಾಮ ಸಾವಿರಾರು ಭಕ್ತರು ಪರದಾಡಿದರು. ಕೆಲವು ಭಕ್ತರು ಸುತ್ತು ಬಳಸಿ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುತ್ತಿದ್ದಾರೆ. ಅಲ್ಲದೇ ಉರಗೋಳ ಗ್ರಾಮವೂ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಐದು ಬೈಕ್ ಗಳು ಕೊಚ್ಚಿ ಹೋಗಿವೆ. ನೀರಿನ ರಭಸದಲ್ಲಿ ಕೊಚ್ಚಿ ಹೋಗುತ್ತಿದ್ದ ಒಂದು ಬೈಕ್ ನ್ನು ಸ್ಥಳೀಯರು ಹರಸಾಹಸ ಪಟ್ಟು ರಕ್ಷಿಸಿದ್ದಾರೆ‌‌. ರಾಜ್ಯದ 16 ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

WhatsApp Group Join Now
Telegram Group Join Now
Share This Article