ಚಿಕ್ಕಜಂಬಗಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ ; ಸಿಸಿ ಕ್ಯಾಮರಾ, ಬಲೆಗಳ ಅಳವಡಿಕೆ

Ravi Talawar
ಚಿಕ್ಕಜಂಬಗಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ ; ಸಿಸಿ ಕ್ಯಾಮರಾ, ಬಲೆಗಳ ಅಳವಡಿಕೆ
WhatsApp Group Join Now
Telegram Group Join Now

ಜಮಖಂಡಿ; ತಾಲೂಕಿನ ಚಿಕ್ಕಜಂಬಗಿ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷ ವಾಗಿದ್ದು ಕಳೆದ ನಾಲ್ಕು ದಿನಗಳಿಂದ ಸಾಕಿದ ಆಡು, ನಾಯಿಗಳನ್ನು ತಿಂದು ಹಾಕುತ್ತಿದೆ. ರಾತ್ರಿ ಸಮಯದಲ್ಲಿ ದಾಳಿ ಮಾಡುತ್ತಿರುವ ಚಿರತೆ ರೈತರಿಗೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗೊಚರಿಸುತ್ತಿಲ್ಲ. ಗುರುವಾರ ಅರಣ್ಯ ಇಲಾಖೆಯ ಡಿಎಫ್‌ಓ ಮಹೇಶ, ವಲಯ ಅರಣ್ಯ ಇಲಾಖೆಯ ಆರ್‌ಎಫ್‌ಓ ಕಿರಣ ದಾಸಿರೆಡ್ಡಿ ಹಾಗೂ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಚಿರತೆಯ ಹೆಜ್ಜೆಯ ಗುರುತುಗಳನ್ನು ಪತ್ತೆ ಹಚ್ಚಿದ್ದಾರೆ. ಚಿರತೆ ಕೊಂದು ಹಾಕಿರುವ ನಾಯಿಯ ಕಳೆಬರವನ್ನು ವೀಕ್ಷಿಸಿ ಖಚಿತ ಪಡಿಸಿದ್ದು 3 ಸಿಸಿ ಕ್ಯಾಮರಾ ಹಾಗೂ ಬಲೆಗಳನ್ನು ಅಳವಡಿಸಿದ್ದಾರೆ. ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಿದ್ದು ರಾತ್ರಿ ಸಮಯದಲ್ಲಿ ಒಂಟಿಯಾಗಿ ಓಡಾಡದಂತೆ ಸೂಚನೆ ನೀಡಿದ್ದಾರೆ. ಅದರಂತೆ ಸಾಕು ಪ್ರಾಣಿಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಕಟ್ಟಿಕೊಳ್ಳುವಂತೆ ತಿಳಿಸಿದ್ದಾರೆ.

ಗ್ರಾಮದ ಹಣಮಕ್ಕನವರ ಎಂಬುವರಿಗೆ ಸೇರಿದ 4 ಆಡುಗಳನ್ನು ಚಿರತೆ ತಿಂದು ಹಾಕಿದೆ ಅದರಂತೆ ಗಿರಿಮಲ್ಲ ಬಿರಾದಾರ ಎಂಬುವರಿಗೆ ಸೇರಿದ ಸಾಕು ನಾಯಿಯನ್ನು ಕೊಂದು ಹಾಕಿದೆ. ರಾತ್ರಿಹೊತ್ತಿನಲ್ಲಿ ಚಿರತೆ ದಾಳಿ ಮಾಡುತ್ತಿದ್ದು ಕಬ್ಬಿನ ಗದ್ದೆಗಳಲ್ಲಿ ಓಡಿಹೋಗುತ್ತಿದ್ದು ರೈತರ ಕಣ್ಣಿಗೆ ಕಾಣುತ್ತಿಲ್ಲ. ಬೆಳಗಿನ ಜಾವ 3 ರಿಂದ 5 ಗಂಟೆಯ ಸಮಯದಲ್ಲಿ ದಾಳಿ ನಡೆಸುತ್ತಿದೆ. ತೋಟದ ಮನೆಗಳಲ್ಲಿ ವಾಸವಾಗಿರುವ ರೈತರು ಗಾಬರಿ ಗೊಂಡಿದ್ದಾರೆ ಎಂದು ಅಶೋಕ ಮಲಕಪ್ಪನವರ ತಿಳಿಸಿದ್ದಾರೆ. ಅರಣ್ಯ ಇಲಾಖೆ ಹಾಗೂ ವನ್ಯಜೀವಿಗಳ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಲು ಬಲೆ ಬೀಸಿದ್ದಾರೆ.

WhatsApp Group Join Now
Telegram Group Join Now
Share This Article