ರಾಯಬಾಗ: ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗಡೆ ಅವರ ತೇಜೋವಧೆ ಮಾಡುತ್ತಿರುವುದನ್ನು ಮತ್ತು ಜೈನ ಧರ್ಮದ ಸಮಾಜದ ಬಾಂಧವರ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿರುವುದನ್ನು ರಾಯಬಾಗ ತಾಲೂಕಾ ಅರಿಹಂತ ಚಾರಿಟೇಬಲ್ ಸಂಸ್ಥೆ ಹಾಗೂ ಜೈನ ಸಮಾಜದ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ತಾಲೂಕಾಧ್ಯಕ್ಷ ಡಿ.ಸಿ.ಸದಲಗಿ ಹೇಳಿದರು.
ಬುಧವಾರ ಸಾಯಂಕಾಲ ಪಟ್ಟಣದ ಮಹಾವೀರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳವು ಸರ್ವ ಧರ್ಮಿಯರ ಪವಿತ್ರ ಧರ್ಮಕ್ಷೇತ್ರವಾಗಿದ್ದು, ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗಡೆಯವರು ಚಿಕ್ಕ ವಯಸ್ಸಿನಲ್ಲಿಯೇ ಧರ್ಮಾಧಿಕಾರಿ ಜವಾಬ್ದಾರಿ ಹೊತ್ತು, ಹಲವಾರು ಜನೋಪಯೋಗಿ ಕಾರ್ಯಗಳನ್ನು ಮಾಡುತ್ತ, ಕ್ಷೇತ್ರದ ಮಹಿಮೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದರು.
ಕ್ಷೇತ್ರದ ದೈವ ಮಂಜುನಾಥ ಸ್ವಾಮೀಯನ್ನು ಗೌರವಪೂರ್ವಕ ಪೂಜಿಸುತ್ತಾರೆ. ನ್ಯಾಯ ಅನ್ಯಾಯ ಪ್ರಶ್ನೆ ಬಂದಾಗ ರಾಜಕಾರಣಿಗಳು ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ಮೇಲೆ ಆಣೆ ಪ್ರಮಾಣ ಮಾಡುತ್ತಾರೆ. ಅಂತಹ ಕ್ಷೇತ್ರದ ಬಗ್ಗೆ ಮತ್ತು ಧರ್ಮಾಧಿಕಾರಿ ಬಗ್ಗೆ ಕೆಲವೊಂದು ದುಷ್ಟಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಅಪಪ್ರಚಾರ ಮಾಡುತ್ತಿರುವುದು ಖಂಡನೀಯವಾಗಿದೆ. ಈಗಾಗಲೇ ಸರ್ಕಾರ ಎಸ್‌ಐಟಿ ರಚನೆ ಮಾಡಿ ಸಂಪೂರ್ಣ ತನಿಖೆಕೆ ಆದೇಶ ಮಾಡಿದ್ದು, ಸೂಕ್ತವಾದ ತನಿಖೆಯಿಂದ ಸತ್ಯಾಂಶ ಹೊರ ಬರಲಿ ಎಂಬುದು ಎಲ್ಲರ ಆಶಯವಾಗಿದೆ ಎಂದರು.
ಪೊಲೀಸ್ ಇಲಾಖೆಯಿಂದ ವಜಾಗೊಂಡಿರುವ ಮಟ್ಟೆನ್ನವರ ಹಾಗೂ ಯುಟ್ಯೂಬರ‍್ಸ್‌ಗಳಾದ ಸಮೀರ, ಮಹೇಶ ತಿಮ್ಮರೂಡಿ ಮತ್ತು ವಕೀಲ ವೃತ್ತಿಯಲ್ಲಿರುವ ಜಗದೀಶ ಅವರು ಸಾಮಾಜಿಕ ಜಾಲ ತಾಣಗಳಲ್ಲಿ ಜೈನಧರ್ಮದ ಬಗ್ಗೆ ಅವಹೇಳನಕಾರಿ ಮತ್ತು ಆಧಾರ ರಹಿತವಾಗಿ ಅಶ್ಲೀಲವಾಗಿ ಮಾತನಾಡುತ್ತಿರುವುದು ಜೈನ ಸಮಾಜ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರ ಇಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಸಂಜಯ ಬಡೋರೆ, ಕಾರ್ಯದರ್ಶಿ ಮಲ್ಲಪ್ಪ ಖಾನಟ್ಟಿ, ನಿರ್ದೇಶಕರಾದ ಈರಗೌಡ ಪಾಟೀಲ, ಡಿ.ಎಮ್.ಶೆಟ್ಟಿ, ಶೀತಲ ಬೇಡಕಿಹಾಳೆ, ಸಂಜಯ ಹಂಜೆ, ಪಾರೀಶ ಉಗಾರೆ, ಭರತೇಶ ಪಾಟೀಲ, ನೇಮಿನಾಥ ಅಸ್ಕಿ, ವರ್ಧಮಾನ ಬನವಣೆ, ಎಸ್.ಟಿ.ಮುನ್ನೊಳಿ, ಜನೇಂದ್ರ ಖೆಮಲಾಪೂರೆ, ಸನ್ಮತಿ ಶೆಟ್ಟಿ, ಸಿದ್ದಪ್ಪ ನಾಗನೂರ ಇದ್ದರು.