ಬೆಳಗಾವಿ, ಮಾರ್ಚ್27: ಮೋದಿ ಬಗ್ಗೆ ಯಾರೇ ಏನೇ ಮಾತನಾಡುವುದಕ್ಕಿಂತ ಮುಂಚಿತವಾಗಿ ಯೋಚಿಸಬೇಕು. ಯಾಕೆಂದರೆ ಮೋದಿ ಇವತ್ತು ವಿಶ್ವ ಮೆಚ್ಚುವಂತ ಪ್ರಧಾನಿಯಾಗಿ ಬೆಳೆದಿದ್ದಾರೆ. ಅವರ ಕುರಿತು ಹಗುರುವಾಗಿ ಮಾತನಾಡಿ ದೊಡ್ಡವರಾಗಬೇಕು ಎಂದುಕೊಂಡಿದ್ದರೆ ಅದು ಮೂರ್ಖತನ. ಹೀಗಾಗಿ ಸಿಎಂ ಸ್ಥಾನದಲ್ಲಿರುವ ಸಿದ್ದರಾಮಯ್ಯ ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಪ್ರತಿಯೊಂದು ವಿಧಾನಸಭೆಗೂ ಭೇಟಿ ನೀಡಿ ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಾರೆ. ಇದೀಗ ಮೋದಿ ಅವರನ್ನು ಗೆಲ್ಲಿಸುವುದಕ್ಕೆ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವ ಗುರಿಯಿದೆ ಹೊರತು ಯಾವುದೇ ರೀತಿಯ ಅಸಮಾಧಾನ, ಬೇಸರ ಯಾರಲ್ಲಿಯೂ ಇಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.
ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರನ್ನು ಬೆಂಬಲಿಸುವ ಉದ್ದೇಶದಿಂದ ಜಿಲ್ಲೆಗೆ ಆಗಮಿಸಿದ ಬಿಎಸ್ವೈ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲೆಯ ಬಿಜೆಪಿ ನಾಯಕರು, ಮುಖಂಡರು, ಕಾರ್ಯಕರ್ತರ ಜೊತೆಗೆ ಖಾಸಗಿ ಹೋಟೇಲ್ನಲ್ಲಿ ಸಭೆ ನಡೆಸಲು, ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲು ಎಲ್ಲರ ವಿಶ್ವಾಸನೀಯ ಸಭೆ ನಡೆಸಲು ಆಗಮಿಸಿದ್ದೇನೆ. ಚಿಕ್ಕೋಡಿ ಮತ್ತು ಬೆಳಗಾವಿ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳೇ ಜಯಿಸಲಿದ್ದಾರೆ ಎಂದು ವಿಶ್ವಾಶ ವ್ಯಕ್ತಪಡಿಸಿದರು.
ಮುಖಂಡ ರವಿಕುಮಾರ್ ಮಾತನಾಡಿ, ಹೆಬ್ಬಾಳ್ಕರ್ ಸೇರಿದಂತೆ ಕಾಂಗ್ರೆಸ್ನವರಿಗೆ ಈಗ ಕೇಸರಿ, ಭಗವಾ ಧ್ವಜದ ಬಗ್ಗೆ ಕಾಳಜಿ, ಪ್ರೀತಿ ಉಕ್ಕಿ ಹರಿಯುತ್ತಿದೆ. ದಿಢೀರನೇ ಹೀಗೆ ಆಸಕ್ತಿ ಬೆಳೆಯುವುದಕ್ಕೆ ಏನು ಕಾರಣ ಅಂತ ಪ್ರಶ್ನಿಸುವುದರ ಜೊತೆಗೆ ಕಾಂಗ್ರೆಸ್ ನಾಯಕರನ್ನು ಟೀಕಿಸಿದರು.
ಬೆಳಗಾವಿ, ಚಿಕ್ಕೋಡಿ ಅವಳಿ ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರಿಗೇ ಟಿಕೆಟ್ ಕೊಡಬೇಕು ಅನ್ನುವ ಮಾತಿತ್ತು. ಆದರೆ ಈಗ ಹೈ ಕಮಾಂಡ್ ತೆಗೆದುಕೊಂಡ ನಿರ್ಧಾರ ಹಾಗೂ ಟಿಕೆಟ್ ಘೋಟಣೆಯನ್ನು ಎಲ್ಲ ಕಾರ್ಯಕರ್ತರು ಒಪ್ಪಿಕೊಂಡಿದ್ದಾರೆ. ಈಗ ನಿಂತಿರುವ ಅಭ್ಯರ್ಥಿಗಳನ್ನೇ ಗೆಲ್ಲಿಸಿಕೊಂಡು ಬರುವುದಕ್ಕೆ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಕ್ಕೆ ಎಲ್ಲರೂ ಶ್ರಮಿಸುತ್ತಿದ್ದಾರೆ ಎಂದು ರವಿಕುಮಾರ್ ಹೇಳಿದರು. ಈ ವೇಳೆಯಲ್ಲಿ ಮಾಜಿ ಶಾಸಕ ಅನೀಲ್ ಬೆನಕೆ ಹಾಗೂ ಇನ್ನೀತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.