ಹಾಸನದ ರತ್ನಕಲಾ ಪದ್ಮ ಕುಟೀರ ಟ್ರಸ್ಟ್ ನ ಭಾಗವಾಗಿ, ೨೦೦೭ ಜೂಲೈ ೧೮ ರಂದು ಸ್ಥಾಪನೆಗೊಂಡು ಸತತವಾಗಿ ೧೮ ವರ್ಷಗಳಿಂದ ಹಾಸನದ ನಾಟ್ಯಕಲಾ ನಿವಾಸ್ ಸಂಸ್ಥೆಯು ಹಲವಾರು ದೇಶಗಳಲ್ಲಿ ಪ್ರಖ್ಯಾತಿ ಹೊಂದಿರುವ ನಾಟ್ಯ ತರಭೇತಿ ಸಂಸ್ಥೆಯಾಗಿ ಹಾಸನದ ಹೆಸರನ್ನ ವಿಶ್ವಮಟ್ಟದಲ್ಲಿ ದಾಖಲಿಸಿದ ಹೆಗ್ಗಳಿಕೆ ಹೊಂದಿದೆ. ಭಾರತೀಯ ನೃತ್ಯ ಪರಂಪರೆಯ ವಿಭಿನ್ನ ಶೈಲಿಗಳ ಜೊತೆಯಲ್ಲಿ, ವಿದೇಶಿಯ ನೃತ್ಯ ಪರಂಪರೆಯನ್ನ ಹಾಸನ ಜನತೆಗೆ ಪರಿಚಯಿಸಿದೆ.
ಇದೇ ಆಗಸ್ಟ್ ೨ ಶನಿವಾರ ಹಾಸನದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ೧೮ ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ.. ’ ಹರಿಹರ ಸುತ’ – ಅಯ್ಯಪ ಸ್ವಾಮಿಯ ಚರಿತ್ರೆ ಆಧಾರಿತ ನೃತ್ಯ ನಾಟಕವನ್ನು ಸುಮಾರು ೧೦೦ ಸಂಸ್ಥೆಯ ಮಕ್ಕಳೊಂದಿಗೆ ಪ್ರಸ್ತುತಿ ಪಡಿಸಿ ಪ್ರೇಕ್ಷಕರ ಮನಸೆಳೆಯಿತು. ಮೈಸೂರಿನ ಖ್ಯಾತ ವಾದ್ಯ ಕಲಾವಿದರು ವಿಕ್ರಂ ಭರದ್ವಾಜ, ಸಮೃದ್ ಶ್ರೀನಿವಾಸ್, ಸುಜೇಯೇಂದ್ರ, ವಿನಯ್ ರಂಗದೊಳ್ ಕೇರಳದ ಹರಿದಾಸ್ ಸೇರಿದಂತೆ, ಸುಬ್ಬ್ರಮಣ್ಯ ರಾವ್ ಹಾಗು ಹರಿಣಾಕ್ಷಿ, ವಿದ್ವಾನ್ ಉನ್ನತ್ ಜೈನ್ ಇವರ ಧ್ವನಿಯೊಂದಿಗೆ ರೂಪುಗೊಂಡ ಪ್ರಸ್ತುತಿ ಅಮೋಘವಾಗಿತ್ತು. ಭಾಗವಹಿಸಿದ ಹಿರಿಯ ಕಿರಿಯ ಕಲಾವಿದರಿಗೆ, ವಿದ್ಯಾರ್ಥಿಗಳಿಗೆ ಶ್ರೀ ಅಯ್ಯಪಸ್ವಾಮಿಯ ಕಥಾ ಪರಿಚಯ ವಿಭಿನ್ನ ನೃತ್ಯ ಭಾವಾಭಿನಯದಲ್ಲಿ ಬೆಳಕಿನ ವಿನ್ಯಾಸದಲ್ಲಿ ಸೊಗಸಾಗಿ ಮೂಡಿಬಂತು. ಹಾಸನದ ಪ್ರದೀಪ್ ಬೆಳಕಿನ ವಿನ್ಯಾಸದಿಂದ ಪ್ರಸ್ತುತಿಯ ಸೊಬಗು ಹೆಚ್ಚಿಸಿದರು. ಅಂತಾರಾಷ್ಟ್ರೀಯ ಕಲಾವಿದರು ಉನ್ನತ್ ಜೈನ್ ಪರಿಕಲ್ಪನೆಯ ಈ ಪ್ರಸ್ತುತಿಗೆ ಸ್ವತಃ ಜೈನ್ ಅವರೇ ಸಾಹಿತ್ಯ, ಹಾಡು ಬರೆದು ಸಂಪೂರ್ಣ ನೃತ್ಯ ಪ್ರಸ್ತುತಿಯ ಸಂಯೋಜನೆ ಮಾಡಿದ್ದು ಅಭಿನಂದನಾರ್ಹರು. ಅವರ ಶಿಷ್ಯರಾದ ಮಾನಸ ಆರ್ ನಾಡಿಗ್, ಮನನ, ವೈಷ್ಣವಿ ಜಯರಾಮ್, ಮೇಘನಾ ಎಚ್.ಆರ್, ಸುಯ್ಯಜ್ಞ , ಆಪ್ತ ಸಂಯೋಜನೆಯಲ್ಲಿ ಸಹಕರಿಸಿದರು.
ಮಂಗಳೂರಿನ ರಾಧಿಕಾ ಶೆಟ್ಟಿಯವರ ನೇತೃತ್ವದಲ್ಲಿ ೭ನೇ ’ನಾಟ್ಯ ದಾಸೋಹಂ’ ಪ್ರಸ್ತುತಿಯನ್ನು ಕರ್ನಾಟಕದ ಪ್ರಸಿದ್ಧ ಕಲಾವಿದರಾದ ಮಂಗಳೂರಿನ ರಾಧಿಕಾ ಶೆಟ್ಟಿ, ಪುತ್ತೂರಿನ ಮಂಜುಳಾ ಸುಬ್ರಮಣ್ಯ, ಮಂಗಳೂರಿನ ಕರ್ನಾಟಕ ಕಲಾಶ್ರೀ ಶಾರದಾಮಣಿ ಶೇಖರ್ ಹಾಗು ರಾಜಶ್ರೀ ಶೆಣೈ, ಹಾಸನದ ಉನ್ನತ್ ಜೈನ್, ಉಡುಪಿಯ ಮಂಜರಿ ಚಂದ್ರ ಪುಷ್ಪರಾಜ್, ತುಮಕೂರಿನ ಡಾ. ಸಾಗರ್ ಟಿಎಸ್ ಹಾಗು ಮಂಗಳೂರಿನ ವಿದ್ಯಾಶ್ರೀ ರಾಧಾಕೃಷ್ಣ ಅವರು ಕರ್ನಾಟಕ ದಾಸ ಪರಂಪರೆಯ ಶ್ರೀಪಾದರಾಯರು, ವ್ಯಾಸತೀರ್ಥರು, ವಾದಿರಾಜರು, ಪುರಂದರದಾಸರು, ಕನಕದಾಸರು, ವಿಜಯದಾಸರು ಹಾಗು ಜಗನ್ನಾಥ ದಾಸರ ಸಾಹಿತ್ಯಕೆ ಸಂಚಾರೀಭಾವದೊಂದಿಗೆ ನೃತ್ಯ ಸಂಯೋಜಿಸಿ ಸ್ತುತಿಪಡಿಸಿದರು. ಹಿಮ್ಮೇಳದಲ್ಲಿ ಬೆಂಗಳೂರಿನ ಖ್ಯಾತ ವಿದ್ವಾನ್ ನಂದಕುಮಾರಿ ಉನ್ನಿಕೃಷ್ಣನ್ ಹಾಡುಗಾರಿಕೆಯಲ್ಲಿ, ಮೃದಂಗ ವಿದ್ವಾನ್ ಕಾರ್ತಿಕ್ ವೈಧಾತ್ರಿ , ಕೊಳಲು ವಿದ್ವಾನ್ ನಿತೀಶ್ ಅಮ್ಮಣ್ಣಾಯ ಹಾಗು ನಟುವಾಂಗದಲ್ಲಿ ಶ್ರೀಮತಿ ವಿದುಷಿ ಸುಮಂಗಲ ರತ್ನಕರ್ ಸಹಕರಿಸಿದರು. ದಾಸರ ಪರಿಚಯ, ಕಾಲಘಟ್ಟ, ಆಯ್ದ ರಚನೆಯ ವಿಶೇಷತೆಯನ್ನು ವಿದುಷಿ ಡಾ. ರಮ್ಯಾ ಸೂರಜ್ ಪರಿಚಯಿಸಿದರು. ನಾಟ್ಯ ದಾಸೋಹಂನ ೮ ನೇ ಪ್ರಸ್ತುತಿಯನ್ನು ಮೈಸೂರಿನ ರಮಾಗೋವಿಂದ್ ರಂಗ ಮಂದಿರದಲ್ಲಿ ಆಗಸ್ಟ್ ೧೭ ರಂದು ಸಂಜೆ ೬.೩೦ಕ್ಕೆ ಪ್ರದರ್ಶಿಸಲಾಗುವುದು ಉನ್ನತ್ ಜೈನ್ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ನಡುವೆ ಹಾಸನದ ವೈದ್ಯರಾದ ಸೌಮ್ಯ ಮಣಿ ಹಾಗು ಕಲಾವಿದೆ ರಮ್ಯಾ ಸೂರಜ್ ಈರ್ವರಿಗೂ ’ ಸಮಾಜ ಸೇವಾ ತಿಲಕ’ ಬಿರುದು ನೀಡಿ ಗೌರವಿಸಲಾಯಿತು.
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ