ಮಹಾಲಿಂಗಪುರ : ವಿಶೇಷ ದಿನದಂದು ಪ್ರೇಕ್ಷಣೀಯ ಸ್ಥಳ ಅಥವಾ ದೇವಸ್ಥಾನಗಳಿಗೆ ಭೇಟಿಯಾಗುವುದು ವಾಡಿಕೆ. ಆದರೆ ಪಟ್ಟಣದ ಕೆಎಲ್‌ಇ ಸಂಸ್ಥೆಯ ಡಿಪ್ಲೋಮಾ ಕಾಲೇಜಿನ ಸಿಬ್ಬಂದಿ ಕಾಲೇಜಿನ ಶೈಕ್ಷಣಿಕ ವರ್ಷ ಆರಂಭದ ವಿಶೇಷ ದಿನದಂದು ಎಂಬ ವಿಶೇಷ ದಿನದಂದು ವಿಶೇಷ ವ್ಯಕ್ತಿಗಳಿರುವ, ದೇವರ ಸ್ವರೂಪದಂತಿರುವ ಬುದ್ದಿಮಾಂದ್ಯ ಮಕ್ಕಳಶಾಲೆಗೆ ಭೇಟಿ ನೀಡಿ ಕಳಕಳಿ ಮೆರೆದಿದ್ದಾರೆ.
ಮುಧೋಳದ ಬಳ್ಳೂರ ಪ್ಲಾಟ್‌ನಲ್ಲಿರುವ ಬುದ್ದಿಮಾಂದ್ಯ ಮಕ್ಕಳ ಶಾಲೆಗೆ ಭೇಟಿ ನೀಡಿ ಫ್ರೆಂಡ್‌ಶಿಪ್ ಡೇ ಆಚರಿಸಿ ಅವರಿಗೆ ಸಿಹಿ ಮತ್ತು ಖಾರಾ ತಿಂಡಿ ತಿನ್ನಿಸಿ ವಿಶೇಷವಾಗಿ ಹೊತ್ತುಗಳೆದರು. ಅವರಿಗೆ ಕಲಿಸುವುದಕ್ಕಿಂತ ಅವರಿಂದ ಕಲಿಯುವುದು ತುಂಬಾ ಇದೆ ಎಂಬುದನ್ನು ಮನಗಂಡರು.
ಶಾಲೆಯವರು ಮಕ್ಕಳಿಗಾಗಿ ಒಂದು ದಿನಕ್ಕಾಗುವಷ್ಟು ರೇಷನ್ ಸಾಮಾನು ಕೊಡಿಸಿ, ಇಲ್ಲವೇ ನೆನಪುಳಿಯುವಂಥ ಕಾಣಿಕೆ ನೀಡಿರಿ ಎಂದು ಬೇಡಿಕೆ ಇಟ್ಟಾಗ ಸಂತೋಷದಿಂದ ಒಪ್ಪಿಕೊಂಡ ಡಿಪ್ಲೋಮಾ ಕಾಲೇಜ್ ಸಿಬ್ಬಂದಿ ಅದರ ವ್ಯವಸ್ಥೆ ಮಾಡುತ್ತಿದ್ದಾರೆ. ಪ್ರಾಚಾರ್ಯ ಎಸ್‌ಐ.ಕುಂದಗೋಳ, ಉಪನ್ಯಾಸಕರಾದ ವಿಶಾಲ ಮೆಟಗುಡ್ಡ, ಅಮೀತ ಜಾಧವ, ಮಂಜುನಾಥ ಅರಕೇರಿ, ಮಿನಾಜ ಅತ್ತಾರ ಇದ್ದರು.
ಮಕ್ಕಳ ಮುಗ್ಧತೆ, ನಗುವಿನ ಸ್ನಿಗ್ಧತೆ, ನಿಷ್ಕಪಟತೆ ಮುಕ್ತತೆಯ ನಡೆ ಕಂಡು ಕರುಳು ಕಿವುಚಿದಂತಾಯಿತು. ದುರ್ಬುದ್ದಿಯ ಜನರಿಗೆ ಹೋಲಿಸಿದರೆ ಈ ಮಕ್ಕಳೇನೂ ಬುದ್ದಿಮಾಂದ್ಯರಲ್ಲ, ನಿಜವಾಗ್ಲೂ ಇವರೇ ಶುದ್ದಬುದ್ದಿಯವರು ಅಂತ ಅನ್ನಿಸಿತು. ಫ್ರೆಂಡ್‌ಶಿಪ್ ಡೇ ನಿಮಿತ್ತ ಒಂದಿಷ್ಟು ಕಾಲ ಇವರೊಂದಿಗೆ ಕಳೆದಿದ್ದು ನಮಗೂ ಖುಷಿ ತಂದಿತು. ಅವರ ಬೇಡಿಕೆಗೆ ಸ್ಪಂದಿಸುತ್ತೇವೆ.
– ಎಸ್.ಐ.ಕುಂದಗೋಳ ಪ್ರಾಚಾರ್ಯ ಕೆಎಲ್‌ಇ ಪಾಲಿಟೆಕ್ನಿಕ್ ಮಹಾಲಿಂಗಪುರ
ಫೋಟೋ: ೫ ಎಂಎಲ್‌ಪಿ ೨
ಮಹಾಲಿಂಗಪುರದ ಕೆಎಲ್‌ಇ ಡಿಪ್ಲೋಮಾ ಕಾಲೇಜ್ ಸಿಬ್ಬಂದಿ ಮುಧೋಳದ ಬುದ್ದಿಮಾಂದ್ಯ ಮಕ್ಕಳ ಶಾಲೆಗೆ ಭೇಟಿ ನೀಡಿ ಅವರ ಬೇಡಿಕೆಗೆ ಸ್ಪಂದಿಸಿದರು.