* ಕಲ್ಮೇಶ್ವರ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದ ಸಚಿವರು
ಬೆಳಗಾವಿ: ಜನರು ಕೊಟ್ಟ ಅಧಿಕಾರವನ್ನು ಸೂಕ್ತವಾಗಿ ಬಳಸಿಕೊಂಡು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕು. ಅಧಿಕಾರ ಇದ್ದಷ್ಟು ದಿನ, ಜೀವ ಇರುವಷ್ಟು ದಿನ ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ಕೆಲಸ ಮಾಡುವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕೊಂಡಸಕೊಪ್ಪ ಗ್ರಾಮದಲ್ಲಿ ಸಚಿವರು ಒದಿಸಿರುವ ಸುಮಾರು 50 ಲಕ್ಷ ರೂಪಾಯಿಗಳ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಕಲ್ಮೇಶ್ವರ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವರು, ಕಲ್ಮೇಶರ ದೇವಸ್ಥಾನವನ್ನು ಭವ್ಯವಾಗಿ ನಿರ್ಮಿಸಲಾಗುತ್ತಿದೆ. ಮುಂದಿನ ಶ್ರಾವಣದ ವೇಳೆಗೆ ದೇವಸ್ಥಾನದ ಉದ್ಘಾಟನೆ ಆಗಲಿ ಎಂಬುದೇ ನನ್ನ ಆಶಯವಾಗಿದೆ ಎಂದು ಹೇಳಿದರು.
ಭಾರತದ, ಹಿಂದು ಸಂಸ್ಕೃತಿಯಲ್ಲಿ ಶ್ರಾವಣ ಸೋಮವಾರಕ್ಕೆ ತುಂಬಾ ಪಾವಿತ್ರ್ಯತೆ ಇದೆ. ನಾನು ದೈವ ಭಕ್ತಳು, ಯಾವತ್ತೂ ಜಾತಿ ಭೇದ ಮಾಡಿದವಳಲ್ಲ, ಎಲ್ಲಾ ಜಾತಿ ವರ್ಗದವರಿಗೂ ಅವರ ದೇವಸ್ಥಾನಗಳಿಗೆ ಹಣ ನೀಡಿರುವೆ, ಒಂದೇ ಗ್ರಾಮದಲ್ಲಿ ಮೂರು ದೇವಸ್ಥಾನಗಳಿಗೆ ತಲಾ ಒಂದು ಕೋಟಿ ರೂಪಾಯಿ ನೀಡಿರುವೆ ಎಂದು ಹೇಳಿದರು.
ನನಗೆ ಧೈರ್ಯವೇ ನನ್ನ ಮತದಾರರು, ನನ್ನನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸಿಕೊಟ್ಟಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಾದ್ಯಂತ 140 ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಿರುವೆ. ನಮಗೆ ದೇವಸ್ಥಾನ ಎಂದರೆ ಭಕ್ತಿ, ಭಯ ಎರಡೂ ಇದೆ. ಕಷ್ಟಕಾಲದಲ್ಲಿ ನಾವು ನೆನೆಯುವುದೇ ದೇವರನ್ನು, ಎಲ್ಲಾ ಗ್ರಾಮಗಳಲ್ಲೂ ದೇವಸ್ಥಾನಗಳನ್ನು ಜೀರ್ಣೋದ್ದಾರ ಮಾಡಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಜನರ ಪ್ರೀತಿ ವಿಶ್ವಾಸ, ಆಶೀರ್ವಾದ ನನ್ನ ಮೇಲಿರಲಿ. ದೇವರ ಮೇಲಿನ ಭಕ್ತಿ, ಜನರ ಆಶೀರ್ವಾದ ನನ್ನ ಮೇಲೆ ಇದ್ದ ಪರಿಣಾಮ ಅಷ್ಟು ದೊಡ್ಡ ಅಪಘಾತದ ನಡುವೆಯೂ ಬದುಕಿ ಬಂದಿರುವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುತ್ನಾಳದ ಶ್ರೀ ಶಿವಾನಂದ ಶಿವಾಚಾರ್ಯರು, ಬಡೇಕೊಳ್ಳಿಮಠದ ಶ್ರೀ ನಾಗೇಂದ್ರ ಮಹಾಸ್ವಾಮಿಗಳು, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಲಕ್ಷ್ಮಣ ಪಾಟೀಲ, ಮಡಿವಾಳಪ್ಪ ಪಾಟೀಲ್, ಅರ್ಜುನ್ ಪಾಟೀಲ್, ಶ್ರೀಕಾಂತ್ ಪಾಟೀಲ್, ಕಲ್ಲಪ್ಪ ಪಾಟೀಲ್, ಶೋಭಾ ಪಾಟೀಲ್, ಶೋಭಾ ಡೋಂಗ್ರೆ, ವಿಠ್ಠಲ ಸಾಂಬ್ರೇಕರ್, ಮಾರುತಿ ವಾಳಕೆ, ಭೀಮಾ ದೇವನ್ನವರ, ಕೃಷ್ಣ ಸನದಿ, ಬಾಳು ಪಾಟೀಲ್, ಮನೋಹರ್ ಮುಚ್ಚಂಡಿ, ಪದ್ಮರಾಜ ಪಾಟೀಲ್ ಉಪಸ್ಥಿತರಿದ್ದರು.