ಜಮಖಂಡಿ;ಇದೇ ತಿಂಗಳು 16 ರಂದು ಹಿಪ್ಪರಗಿಯ ಶ್ರೀ ಸಂಗಮೇಶ್ವರ ಮಹಾರಾಜರ ದಿವ್ಯ ಕ್ಷೇತ್ರ ತಾಲೂಕಿನ ಹಿಪ್ಪರಗ್ರಾಮದ ಕೃಷ್ಣಾ ನದಿ ತೀರದಲ್ಲಿ ಮಾಜಿ ಸಚಿವ, ಉದ್ಯಮಿ ಮುರುಗೇಶ ನಿರಾಣಿ ಅವರ ಜನ್ಮದಿನದ ಪ್ರಯುಕ್ತ ಎಂಆರ್‌ಎನ್ ಫೌಂಡೇಷನ್ ಹಾಗೂ ತಾಲೂಕಿನ ಸಮಸ್ತ ರೈತರ ನೇತೃತ್ವದಲ್ಲಿ ಏರ್ಪಡಿಸಿರುವ ಕೃಷ್ಣಾ ಪುಣ್ಯಸ್ನಾನ, ಕೃಷ್ಣಾ ಆರತಿ, ಕುಂಭಮೇಳ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ಪ್ರಾರಂಭ ವಾಗಿದೆ ಎಂದು ಎಂಆರ್‌ಎನ್ ಫೌಂಡೇಷನ್‌ನ ಪಿ.ಎನ್.ಪಾಟೀಲ ತಿಳಿಸಿದರು. ನಗರದ ರಮಾನಿವಾಸ ನಿರೀಕ್ಷಣ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ದೇವರ ಪಲ್ಲಕ್ಕಿಗಳು ಸೇರಲಿವೆ, ನೂರಕ್ಕೂ ಹೆಚ್ಚುಜನ ನಾಗಾಸಾಧುಗಳು ಭಾಗವಹಿಸಲಿದ್ದಾರೆ. ಕಾಶಿ ಕ್ಷೇತ್ರದ ಪ್ರಸಿದ್ಧ ಗಂಗಾಆರತಿಯ ಪಂಡಿತರ 4 ತಂಡಗಳು ಕೃಷ್ಣಾ ಆರತಿ ಕಾರ್ಯಕ್ರಮ ನಡೆಸಿ ಕೊಡಲಿದ್ದು ಈ ಎಲ್ಲ ಪುಣ್ಯ ಕಾರ್ಯದಲ್ಲಿ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ದೇವರ ಗುರುಗಳ ಆಶೀರ್ವಾದ ಪಡೆದು ಕೊಳ್ಳಬೇಕು ಎಂದು ಮನವಿ ಮಾಡಿದರು. ನಾಗಾಸಾಧುಗಳ, ಸಂತರ ದರ್ಶನ ದಿಂದ ನಾಡಿಗೆ ಒಳ್ಳೆಯದಾಗಲಿದೆ. ಕಾಶಿ, ಪ್ರಯಾಗರಾಜ ಗಳಲ್ಲಿ ನಡೆಯುವ ಕುಂಭ ಮೇಳಗಳನ್ನು ವೀಕ್ಷಿಸಲು ಸಾಧ್ಯವಾಗದವರಿಗೆ ಇದೊಂದು ಉತ್ತಮ ಅವಕಾಶ ಮತ್ತು ಪುಣ್ಯ ಸಾಧನೆಯ ಪ್ರಸಂಗವಾಗಿದೆ ಎಂದು ವಿವರಣೆ ನೀಡಿದರು.
ರೈತ ಮುಖಂಡ ಸೋಮನಾಥಗೌಡ ಪಾಟೀಲ ಮಾತನಾಡಿದರು. ಇಂಥದೊಂದು ಕಾರ್ಯಕ್ರಮವನ್ನು ಆಯೋಜನೆ ನಮ್ಮ ತಾಲೂಕಿನಲ್ಲಿ ಆಗಿರುವದು ನಮ್ಮೆಲ್ಲರ ಭಾಗ್ಯ, ನಾಗಾಸಾಧುಗಳ 13 ಅಖಾಡಾಗಳ ಮುಖ್ಯಸ್ಥರನ್ನು ಭೇಟಿಮಾಡಿ ಚರ್ಚಿಸಿದ್ದೇವೆ ಅವರು ಇಲ್ಲಿಗೆ ಬಂದು ಸ್ಥಳ ವೀಕ್ಷಣೆ ಮಾಡಿ ನಂತರ ಇಲ್ಲಿಗೆ ಅವರಿಗೆ ಬೇಕಾಗುವ ವ್ಯವಸ್ಥೆಗಳನ್ನು ತಿಳಿಸಿಕೊಡಲಿದ್ದಾರೆ. ಅವರ ದರ್ಶನ ಆಶೀರ್ವಾದ ನಮ್ಮ ಭಾಗದ ಜನರಿಗೆ ದೊರೆಯಲಿ ಎಂಬ ಭಾವನೆಯಿಂದ ಎಂಆರ್‌ಎನ್ ಫೌಂಡೇಷನ್ ಇಂಥದೊಂದು ಅಭೂತ ಪೂರ್ವ ಕಾರ್ಯಕ್ರಮವನ್ನು ಏರ್ಪಡಿಸಿದೆ. ಕಳೆದವರ್ಷವೂ ಕೃಷ್ಣಾ ಆರತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಮಾಡಿದ್ದೇವೆ. ಈ ಬಾರಿ ನಾಗಾ ಸಾಧುಗಳು ಹಾಗೂ ದೇವರ ಪಲ್ಲಕ್ಕಿಗಳು, ಅನೇಕ ಸಾಧು ಸಂತರು, ಕಲಾವಿದರು ನಾಡಿನ ಸಾಹಿತಿಗಳು ಭಾಗವಹಿಸಲಿದ್ದಾರೆ. ಕುಂಭ ಮೇಳದ ಮಾದರಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಎಲ್ಲರೂ ಭಾಗವಹಿಸಿ ಅಭೂತಪೂರ್ವ ಕ್ಷಣಗಳಿಗೆ ಸಾಕ್ಷಿಯಾಗಬೇಕು ಎಂದು ಮನವಿ ಮಾಡಿದರು. ಶಂಕರಗೌಡ ಪಾಟೀಲ, ಈಶ್ವರ ಕರೆಬಸಣ್ಣವರ, ಯು.ಕೆ.ಗಸ್ತಿ, ಮಹಾವೀರಗೌಡ ಪಾಟೀಲ, ರವಿ.ಕವಳೆ, ನಿತೀನ ಹುಲ್ಯಾಳ ಕರ, ಅಪ್ಪಾಸಾಹೇಬ ಚೌಹಾಣ, ಈಶ್ವರ ನ್ಯಾಮಗೌಡ, ಚಂದ್ರು ಜನವಾಡ ಇದ್ದರು.