‘ದಾವಣಗೆರೆ ಬಿಜೆಪಿ ಬಂಡಾಯ ಶಮನ’ರಾಜಾಹುಲಿ ಸಂಧಾನ ಹೇಗೆ ಸಕ್ಸಸ್ ಆಯ್ತು?

Ravi Talawar
‘ದಾವಣಗೆರೆ ಬಿಜೆಪಿ ಬಂಡಾಯ ಶಮನ’ರಾಜಾಹುಲಿ ಸಂಧಾನ ಹೇಗೆ ಸಕ್ಸಸ್ ಆಯ್ತು?
WhatsApp Group Join Now
Telegram Group Join Now

ದಾವಣಗೆರೆ, ಮಾರ್ಚ್‌, 26: ದಾವಣಗೆರೆ ಬಿಜೆಪಿಯಲ್ಲಿ ಎದ್ದಿದ್ದ ಬಂಡಾಯ ಶಮನಗೊಳಿಸುವಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಯಶಸ್ವಿಯಾಗಿದ್ದು, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ನೇತೃತ್ವದಲ್ಲಿ ಚುನಾವಣೆ ಎದುರಿಸಲು ನಿರ್ಧರಿಸಲಾಗಿದೆ.

ಅಪೂರ್ವ ರೆಸಾರ್ಟ್‌ನಲ್ಲಿ ನಡೆದ ಗಂಟೆಗಟ್ಟಲೇ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಬಣದ ನಡುವೆ ನಡೆಸಿದ ಸಂಧಾನ ಯಶಸ್ವಿಯಾಗಿದೆ. ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲೇಬೇಕೆಂಬ ಹಠ ತೊಟ್ಟಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಭಿನ್ನಮತೀಯರ ಜೊತೆ ಮಾತುಕತೆ ನಡೆಸಿದರು.

ಅಪೂರ್ವ ರೆಸಾರ್ಟ್‌ಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ ಅವರು ಸಂಸದ ಸಿದ್ದೇಶ್ವರರ ಬಣ ಹೊರಗಿಟ್ಟು ಸಭೆ ನಡೆಸಿದರು. ಸಭೆಯಲ್ಲಿ ಎಲ್ಲಾ ಮುಖಂಡರು ಮುಕ್ತವಾಗಿ ಚರ್ಚಿಸಿದರು. ರವೀಂದ್ರನಾಥ್, ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಮಾಡಾಳ್ ಮಲ್ಲಿಕಾರ್ಜುನ, ಡಾ.ರವಿಕುಮಾರ್, ಬಸವರಾಜ್ ನಾಯ್ಕ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು. ಅಲ್ಲದೆ, ಯಡಿಯೂರಪ್ಪ ಅವರು ಹೈಕಮಾಂಡ್ ಈ ಬಾರಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿದೆ. ಎಲ್ಲರೂ ಗೆಲುವಿಗೆ ಶ್ರಮಿಸಿ ಎಂದು ಸಲಹೆ ನೀಡಿದರು.

ಸಭೆಯ ಆರಂಭದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆ ಆಗಲೇಬೇಕೆಂದು ರೇಣುಕಾಚಾರ್ಯ ಪಟ್ಟು ಹಿಡಿದರು. ರವೀಂದ್ರನಾಥ್ ಸೇರಿದಂತೆ ಹಲವರು ಬೆಂಬಲ ಸೂಚಿಸಿದರು. ಆ ಬಳಿಕ ಯಡಿಯೂರಪ್ಪ ಅವರು, ದಾವಣಗೆರೆ ಮಧ್ಯಕರ್ನಾಟಕದ ಹೆಬ್ಬಾಗಿಲು. ದಾವಣಗೆರೆ ಜಿಲ್ಲೆಯಾದಾಗಿನಿಂದ ಬಿಜೆಪಿ ಸೋತಿಲ್ಲ. ಈ ಬಾರಿಯೂ ಸೋಲಬಾರದು. ಎಲ್ಲರೂ ಒಟ್ಟಾಗಿ ಗಾಯತ್ರಿ ಸಿದ್ದೇಶ್ವರ ಗೆಲುವಿಗೆ ಪ್ರಯತ್ನಿಸಬೇಕು. ಮತ್ತೆ ಬಿಜೆಪಿ ಭದ್ರಕೋಟೆ ಎಂಬುದು ಸಾಬೀತಾಗಬೇಕು. ಈ ಮೂಲಕ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಲು ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು.

ಅಪಸ್ವರ ಎತ್ತಿರುವವರ ಸ್ವರ ಸರಿಪಡಿಸಿದ ಯಡಿಯೂರಪ್ಪ ಅವರು, ತಾರಕಕ್ಕೇರಿದ ದಾವಣಗೆರೆ ಬಿಜೆಪಿ ಭಿನ್ನಮತ ಬಿಕ್ಕಟ್ಟು ಶಮನಗೊಳಿಸುವಲ್ಲಿ ಗಂಟೆಗಟ್ಟಲೇ ನಡೆಸಿದ ಸಭೆಯು ಯಶಸ್ವಿಯಾಗಿದೆ. ಸಮರವೋ, ಸಂಧಾನವೋ ಎಂಬ ಕುತೂಹಲ ಮೂಡಿತ್ತಾದರೂ, ಅಂತಿಮವಾಗಿ ಶಾಂತಿಯುತವಾಗಿ ಎಲ್ಲವೂ ಪರಿಹಾರಗೊಂಡಿದೆ.

ಭಿನ್ನರ ಜೊತೆ ಸಭೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ಬಿಜೆಪಿಯಲ್ಲಿ ನವಚೈತನ್ಯ ಮೂಡಿದೆ. ಯಡಿಯೂರಪ್ಪ ಅವರು ಆಗಮಿಸಿ ಸಮಸ್ಯೆ ಪರಿಹರಿಸಿದ್ದು, ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಸಂತಸ ತಂದಿದೆ. ಭಿನ್ನಮತದಿಂದ ಗೊಂದಲದಲ್ಲಿದ್ದವರು ಈಗ ಖುಷಿ ಆಗಿದ್ದಾರೆ.

ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕರಾದ ಜಿ.ಕರುಣಾಕರ ರೆಡ್ಡಿ, ಎಂ.ಬಸವರಾಜ್ ನಾಯ್ಕ್, ಮಾಜಿ ಎಂಎಲ್‌ಸಿ ಶಿವಯೋಗಿಸ್ವಾಮಿ, ಯುವ ನಾಯಕರಾದ ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ್, ಡಾ.ಟಿ.ಜಿ.ರವಿಕುಮಾರ್, ಸೋಮೇಶ್ವರ ಸುರೇಶ್, ಎಲ್.ಎನ್.ಕಲ್ಲಪ್ಪ ಎಲ್ಲರೊಂದಿಗೆ ಮಾತನಾಡಿ ಯಡಿಯೂರಪ್ಪ ಸಮಸ್ಯೆ ಪರಿಹರಿಸಿದ್ದಾರೆ.

ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸಲು ನಾವು ಪಣ ತೊಟ್ಟಿದ್ದೇವೆ. ಆದರೆ, ದಾವಣಗೆರೆ ಬಿಜೆಪಿಯನ್ನು‌ ಜಿ.ಎಂ.ಸಿದ್ದೇಶ್ವರ ಕುಟುಂಬದ ಹಿಡಿತದಿಂದ ಬಿಡಿಸಿಯೇ ಸಿದ್ಧ ಎಂದು ಬಿಜೆಪಿ ಬಂಡಾಯ ನಾಯಕರು ಹೇಳುತ್ತಿದ್ದಾರೆ. ನಾವು ಯಾರ ವಿರುದ್ಧವೂ ರಣಕಹಳೆ ಮೊಳಗಿಸಿಲ್ಲ. ಮತದಾರರು, ಜನರು, ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ತಿಳಿಸಿದ್ದೇವೆ ಎಂದು ಹೇಳುತ್ತಲೇ ಇದ್ದ ಎಸ್.ಎ.ರವೀಂದ್ರನಾಥ್ ನೇತೃತ್ವದ ತಂಡವು ಮತ್ತೆ ಮೋದಿ ಪ್ರಧಾನಿ ಆಗಬೇಕೆಂಬುದು ನಮ್ಮೆಲ್ಲರ ಆಶಯ. ಇದಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತೇವೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article