ಸವದತ್ತಿ 01- ತಾಲೂಕಿನ ಸರ್ಕಾರಿ ಆದರ್ಶ ವಿದ್ಯಾಲಯ ಯಡ್ರಾವಿ ಶಾಲೆಗೆ ತಾಲೂಕಿನ ಸುಮಾರು 30 ಹಳ್ಳಿಗಳಿಂದ ಆಯ್ಕೆಯಾಗಿರುವ 500ಕ್ಕೂ ಹೆಚ್ಚು ಪ್ರತಿಭಾವಂತ ಮಕ್ಕಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಆದರೆ ಈ ಮಕ್ಕಳಿಗೆ ಸುರಕ್ಷಿತ ಮತ್ತು ಸಮಯಕ್ಕೆ ಸರಿಯಾಗಿ ಶಾಲೆಯ ವೇಳೆಗೆ ಬೆಳಿಗ್ಗೆ ತಲುಪಲು ಸಮರ್ಪಕ ಬಸ್ಸುಗಳ ವ್ಯವಸ್ಥೆ ಇರುವುದಿಲ್ಲ ಮತ್ತು ಶಾಲೆ ಬಿಟ್ಟ ನಂತರ ಇವರಿಗೆ ವಾಪಸ್ ಮನೆಗೆ ಹೋಗಲು ಸೂಕ್ತ ಬಸ್ಸುಗಳ ಸೌಲಭ್ಯ ಮತ್ತು ಬಸ್ಸು ತಂಗುದಾಣ ಇಲ್ಲದೆ ರಸ್ತೆಯ ಅರ್ಧ ಭಾಗದಲ್ಲಿ ನಿಂತು ಪ್ರತಿದಿನವೂ ಬಸ್ಸುಗಳಿಗಾಗಿ ಮಳೆಗಾಲದಲ್ಲಿ ಗಾಳಿ ಮಳೆ ಚಳಿ ಎಲ್ಲವನ್ನು ಲೆಕ್ಕಿಸದೆ ಪರದಾಡುವಂತಾಗಿದೆ.
ರಸ್ತೆಯಲ್ಲಿ ವಿದ್ಯಾರ್ಥಿಗಳು ಬಸ್ಸಿಗಾಗಿ ಕಾಯುವಾಗ ಹಲವಾರು ಬೇರೆ ತರಹದ ದ್ವಿ ಚಕ್ರ ಮತ್ತು ರಿಕ್ಷಾ ಗಳು ಬಿಟ್ಟು ಬಿಡದಂತೆ ವೇಗವಾಗಿ ಮತ್ತು ಅಸುರಕ್ಷತೆ ಯಿಂದ ವಿದ್ಯಾರ್ಥಿಗಳ ಪಕ್ಕದಲ್ಲಿ ಅತಿ ವೇಗವಾಗಿ ಚಲಿಸುತ್ತಿರುತ್ತವೆ. ಈ ಕಾರಣಕ್ಕಾಗಿ ಆ ಶಾಲೆಯ ಹೆಮ್ಮೆಯ ಎಲ್ಲಾ ಪ್ರಾಧ್ಯಾಪಕರು, ಎಸ್ ಡಿ ಎಂ ಸಿ ಸರ್ವ ಸದಸ್ಯರು, ಮಕ್ಕಳ ಪಾಲಕಪೋಷಕರೆಲ್ಲರೂ ಸೇರಿ ಹೆಚ್ಚಿನ ಕಾಳಜಿ ವಹಿಸಿ ಪ್ರತಿದಿನವೂ ಮಕ್ಕಳನ್ನು ಶಾಲೆ ಬಿಟ್ಟು ನಂತರ ಬಸ್ಸುಗಳು ಯಾವಾಗ ಬರುತ್ತವೆ ಎಂದು ಕಾಯುತ್ತಾ ನಿಂತು ಮಕ್ಕಳನ್ನು ಬಸ್ಸಿಗೆ ಹತ್ತಿಸುತ್ತಿದ್ದಾರೆ.
ತಾಸುಗಟ್ಟಲೆ ಬಸ್ ತಡವಾಗಿ ಬಂದಾಗ ಮಳೆ ಬಂದರೂ ಸಹ ಮಳೆಯಲ್ಲಿಯೇ ನಿಲ್ಲಬೇಕಾಗುತ್ತದೆ. ಯಾಕೆಂದರೆ ಆ ಬಸ್ ತಪ್ಪಿದರೆ ಬೇರೆ ಬಸ್ ವ್ಯವಸ್ಥೆ ಇರುವುದಿಲ್ಲ. ಈ ಕಾರಣಕ್ಕೆ ಅಲ್ಲಿನ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಆಗುತ್ತಿದೆ. ನಿಯಮ ಬದ್ಧವಾಗಿ ಬಸ್ಸುಗಳು ಇಲ್ಲದೆ ಇರುವುದರಿಂದ ಆ ಶಾಲೆಯ ಮಕ್ಕಳಿಗೆ ಹೋಂವರ್ಕ್ ಮಾಡಲು ಸಹ ವೇಳೆ ಸಿಗದಂತಾಗಿದೆ ಮತ್ತು ಮಕ್ಕಳ ಪಾಲಕ ಪೋಷಕರಿಗೆ ಮಕ್ಕಳ ಆರೋಗ್ಯ ಸ್ಥಿತಿಯನ್ನು ಕಂಡು ತುಂಬಾ ಗೋಳಾಡುವಂತಾಗಿದೆ.
ಶಾಲೆಯ ಮುಖ್ಯ ಪ್ರಾಧ್ಯಾಪಕರು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಕೆ ಎಸ್ ಆರ್ ಟಿ ಸಿ ಯ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸರ್ಕಾರಿ ಆದರ್ಶ ವಿದ್ಯಾಲಯ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಇದೆ ಸ್ವಲ್ಪ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲೆಯ ಮುಂಭಾಗದಲ್ಲಿ ಬಸ್ ನಿಲ್ಲುವಂತೆ ಮತ್ತು ಶಾಲೆಗಳಿಗೆ ಸರಿಯಾಗಿ ಬಿಡುವಂತೆ ಕೇಳಿಕೊಂಡರು ಇದೂವರೆಗೆ ಯಾವುದೇ ರೀತಿಯ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವಲ್ಲಿ ಸಂಪೂರ್ಣ ವಿಫಲರಾಗಿರುತ್ತಾರೆ. ಕಾರಣ ಅಧಿಕಾರಿಗಳು ಅಲ್ಲಿನ ಸಮಸ್ಯೆಯನ್ನು ಪರಿಶೀಲಿಸಿ ಮಕ್ಕಳ ಹಿತದೃಷ್ಟಿಯಿಂದ ಮುಂಜಾಗ್ರತೆ ಕ್ರಮ ವಹಿಸಲು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಸುರೇಶ ಎಸ್ ಕಾಳಪ್ಪನವರ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಸುಕನ್ಯಾ ಬೀಳಗಿ ಹಾಗೂ ಸರ್ವ ಸದಸ್ಯರು ಹಾಗೂ ಶಾಲೆಯ ಮುಖ್ಯೋಪಾಧ್ಯಯರಾದ ಆರ್ ಎಫ್ ಮಾಘಿ ಹಾಗೂ ಶಿಕ್ಷಕ ವೃಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುತ್ತಾರೆ ಆದರೆ ಇದುವರೆಗೆ ಗಮನಹರಿಸಿಲ್ಲ. ಕಾರಣ ಈ ಕುರಿತು ಅಧಿಕಾರಿಗಳು ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಾರಿಗೆ, ಸುರಕ್ಷತೆ ಬಗ್ಗೆ ಸುವ್ಯವಸ್ಥೆ ಕಲ್ಪಿಸಿಕೊಡಲು ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ