ಯಾದಗಿರಿ: ಜಿಲ್ಲೆಯ ಶಹಾಪೂರ ತಾಲೂಕಿನ ಶಾರದಹಳ್ಳಿ ಗ್ರಾಮದ ಶ್ರೀ ಶಂಕ್ರಪ್ಪ ವಿ. ಆಚಾರ್ಯ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಮಂಗಳವಾರ 26ನೇ ವರ್ಷದ ಕಾರ್ಗಿಲ್ ವಿಜಯ್ ದಿವಸವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆಸಲ್ಲಿಸಲಾಯಿತು.
ನಂತರ ಕಾರ್ಯಕ್ರಮವನ್ನುದ್ದೇಶಿಸಿ ಶಿಕ್ಷಕ ಬಾಲರಾಜ ಎಂ. ವಿಶ್ವಕರ್ಮ ಅರಳಗುಂಡಗಿ ಮಾತನಾಡಿ, 1999ರಲ್ಲಿ ಕಾಶ್ಮೀರದ ಕಾರ್ಗಿಲ್ ಎಂಬ ಸ್ಥಳದಲ್ಲಿ ಭಾರತ ಮತ್ತದರ ಬದ್ಧ ವೈರಿ ಪಾಕ್ ನ ನಡುವೆ ಸುಮಾರು ಎರಡು ತಿಂಗಳುಗಳ ಕಾಲ ನಡೆದ ಆಪರೇಷನ್ ವಿಜಯ ಹೆಸರಿನಡಿಯ ಯುದ್ಧದಲ್ಲಿ ಭಾರತದ ವೀರಯೋಧರು ಪಾಕ್ ಸೇನೆಯನ್ನು ಸದೆಬಡಿದು, ತಮ್ಮ ಪರಾಕ್ರಮವನ್ನು ಮೆರೆದು, ಯುದ್ದವನ್ನು ಗೆದ್ದ ದಿನವೇ ಈ ಕಾರ್ಗಿಲ್ ವಿಜಯೋತ್ಸವ ದಿವಸವಾಗಿದೆ. ಈ ಯುದ್ಧದಲ್ಲಿ ಭಾರತದ 527 ವೀರ ಯೋಧರು ವೀರ ಮರಣವನ್ನಪ್ಪಿದರು. ಹಾಗಾಗಿ ಜು.26 ಭಾರತೀಯರೆಲ್ಲರಿಗೂ ವೀರ ಮರಣವನ್ನಪ್ಪಿದ ಯೋಧರ ತ್ಯಾಗ-ಬಲಿದಾನವನ್ನು ಸ್ಮರಿಸುವ ಮತ್ತು ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸುವ ದಿನವಾಗಿದೆ. ಆದ್ದರಿಂದ ಹುತಾತ್ಮ ಯೋಧರ ಬಲಿದಾನವನ್ನು ಭಾರತೀಯರು ಸದಾ ಸ್ಮರಿಸಬೇಕು ಎಂದರು.
ಈ ಸಂದರ್ಭದಲ್ಲಿ ಶ್ರೀ ಶಂಕ್ರಪ್ಪ ವಿ. ಆಚಾರ್ಯ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಸಂತೋಷ ಎಂ ಆಚಾರ್ಯ ಶಾರದಹಳ್ಳಿ, ಮಹೇಶ ಎಸ್. ವಾರದ, ಮಾನಪ್ಪ ಆರ್. ಸಾಹು ಅರಳಗುಂಡಗಿ, ಚಂದ್ರಶೇಖರ ವಿಶ್ವಕರ್ಮ ದೋರನಹಳ್ಳಿ, ಮೌನೇಶ ಎನ್. ವಿಶ್ವಕರ್ಮ ಶಾರದಹಳ್ಳಿ, ಕು. ಸೃಜನ್ ಎಸ್. ಆಚಾರ್ಯ, ಕು. ಸಮೃದ್ಧ ಎಸ್. ಆಚಾರ್ಯ ಇನ್ನಿತರರು ಉಪಸ್ಥಿತರಿದ್ದರು.