ರಾಯಬಾಗ : ಜನರು ಅನ್ನದಾನ, ಔಷಧಿ ದಾನ ಸೇರಿದಂತೆ ಅನೇಕ ದಾನಗಳನ್ನು ಮಾಡುತ್ತಾರೆ. ಅದರಲ್ಲಿ ವಿದ್ಯಾದಾನ ಸರ್ವ ಶ್ರೇಷ್ಠವಾದದ್ದು ಎಂದು ರಾಷ್ಟ್ರ ಪ್ರಶಸ್ತಿ ವಿಜೇತ, ನಿವೃತ್ತ ಶಿಕ್ಷಕರಾದ ಸುಭಾಷ ಮುನ್ನೊಳ್ಳಿ ಹೇಳಿದರು.
ತಾಲೂಕಿನ ನಸಲಾಪೂರ ಗ್ರಾಮದಲ್ಲಿ ಪ.ಪೂ ಬಾಲಾಚಾರ್ಯ 108 ಡಾ. ಶ್ರೀ. ಸಿದ್ಧಸೇನ ಮುನಿ ಮಹಾರಾಜರ ಪಾವನ ಚಾತುರ್ಮಾಸದ ಅಂಗವಾಗಿ ಇಂದು ಜಿ.ಎಸ್ ಕಾಂತೆ ಹೈಸ್ಕೂಲಿನ ಸಭಾ ಭವನದಲ್ಲಿ ರಾಜ್ಯ ಮಟ್ಟದ ಜೈನ ಶಿಕ್ಷಕರ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಮಕ್ಕಳಲ್ಲಿ ಭವ್ಯ ಭವಿಷ್ಯದ ನಿರ್ಮಾಣಕ್ಕೆ ಜೀವನೋತ್ಸಾಹ ತುಂಬುವ ಶಕ್ತಿ ಶಿಕ್ಷರಲ್ಲಿದೆ. ಮಕ್ಕಳಿಗೆ ಭಯಮುಕ್ತ ಗುಣಮಟ್ಟದ ಶಿಕ್ಷಣ ನೀಡಬೇಕು.ಅವರು ಸಮಾಜದ ಆಸ್ತಿಯಾಗಲು ಶಿಕ್ಷಕರಷ್ಟೆ ಅಲ್ಲ ಪಾಲಕರ ಪಾತ್ರವೂ ಮಹತ್ವದ್ದಾಗಿದೆ.
ಶಿಕ್ಷಕರಿಗೆ ಶಿಸ್ತು ಅಗತ್ಯವಾಗಿ ಬೇಕು. ನಾವೆಲ್ಲರೂ ಗುರುಸ್ಥಾನದಲ್ಲಿ ಇದ್ದೇವೆ. ನಾವು ಅಚ್ಚುಕಟ್ಟಾಗಿ ಉತ್ತಮ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದು ಮಕ್ಕಳಿಗೆ ಮಾದರಿಯಾಗಬೇಕು. ಇಂದಿನ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಪಾಲಕರು ಎಲ್ಲರೂ ಒತ್ತಡದಲ್ಲಿ ಬದುಕುತ್ತಿದ್ದೇವೆ. ಇದರ ನಿವಾರಣೆಗೆ ಉತ್ತಮ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ನಿರಂತರ ಜ್ಞಾನಾರ್ಜನೆಗೆ ನಾವೆಲ್ಲರೂ ಸಿದ್ಧರಾಗಿರಬೇಕು.
ಅಧಿಕಾರ ಹಣ ಶ್ರೀಮಂತಿಕೆ, ಪ್ರಶಸ್ತಿ, ಗೌರವ ನಮ್ಮ ಹೃದಯ ಮಟ್ಟದಲ್ಲಿ ಇರಬೇಕು. ತಲೆಗೆ ಏರಬಾರದು. ಎಂದು ಹೇಳಿದರು.
ಸಾನಿದ್ಯವಹಿಸಿದ ಡಾ. ಶ್ರೀ ಸಿದ್ದಸೇನ ಮುನಿಮಹರಾಜರು ಮಾತನಾಡಿ, ಜೀವನದಲ್ಲಿ ಗುರು ಇಲ್ಲದಿದ್ದರೆ ಜೀವನ ಪ್ರಾರಂಭವಾಗುವುದಿಲ್ಲ. ಹಾಗಾಗಿ ಗುರು ಅವಶ್ಯವಾಗಿ ಬೇಕು. ಇಂತಹ ಶಿಕ್ಷಕರ ಸಮಾವೇಶಗಳು ನಡೆಯಬೇಕು. ಇದು ಎಲ್ಲರಲ್ಲಿ ಒಗ್ಗಟ್ಟನ್ನು ಕಲಿಸುತ್ತದೆ. ಶಿಕ್ಷಕರು ಮಕ್ಕಳಲ್ಲಿ ಜ್ಞಾನವನ್ನು ಹೆಚ್ಚಿಸುವ ಕೆಲಸ ಮಾಡಬೇಕು. ಎಂದರು.
ಈ ಸಂದರ್ಭದಲ್ಲಿ ಬಾವುಸಾಹೇಬ ಪಾಟೀಲ, ಡಾ. ಎನ್ ಎ ಮಗದುಮ, ಭರತೇಶ ಬನವಣೆ, ಟಿ ಆರ್ ಜೋಡಟ್ಟಿ, ಜೆ ಪಿ ತಂಗಡಿ, ರಾಜಗೌಡ ಪಾಟೀಲ, ಸಂಜಯ ಪಾಟೀಲ, ಚಂದ್ರಕಾಂತ ಕಾಂತೆ, ರಾವಸಾಹೇಬ ಪಾಟೀಲ, ಭರತೇಶ ಅಲಗೂರ, ಶ್ರೀಪಾದ ದತ್ತವಾಡೆ, ವಸಂತ ಸಮಾಜೆ, ಭೀಮಗೌಡಾ ಕರನವಾಡಿ ಸೇರಿದಂತೆ ಚಿಕ್ಕೋಡಿ, ರಾಯಬಾಗ, ವಿಜಯಪುರ, ಬಾಗಲಕೋಟೆ, ಬೆಳಗಾವಿ,ಧಾರವಾಡ ಸೇರಿದಂತೆ ಅನೇಕ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು. ವೀರಶ್ರೀ ಸಮಾಜೆ ಸ್ವಾಗತಿಸಿದರು. ಎಸ್ ಜಿ ಖೊಂಬಾರೆ ನಿರೂಪಿಸಿದರು. ಜಯಪಾಲ ಸಮಾಜೆ ವಂದಿಸಿದರು.