ಕಾಗವಾಡ 26: ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ನಿಶ್ಚಿತ ಮತ್ತು ನನ್ನ ಗೆಲುವು ಕೂಡ ನೂರಕ್ಕೆ ನೂರ ಇಪ್ಪತ್ತರಷ್ಟು ನಿಶ್ಚಿತ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು. ಅವರು ಚಮಕೇರಿ ಗ್ರಾಮದಲ್ಲಿ ಚಮಕೇರಿ – ಬ್ಯಾಡರಟ್ಟಿ – ಸಿಂಧೂರ ಗಡಿವರೆಗಿನ 9 ಕೋಟಿ ಅನುದಾನದ 8.77 ಕಿಲೋ ಮೀಟರ್ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.
ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಯಾರ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಆದರೆ ಯಾರು ಅತೀ ಹೆಚ್ಚು ಮತಗಳನ್ನು ಪಡೆಯುತ್ತಾರೋ ಅವರೇ ಗೆಲುವು ಸಾಧಿಸುತ್ತಾರೆ ಎಂದ ಅವರು ಕಾಗವಾಡ ಕ್ಷೇತ್ರದಿಂದ ನಾನು ನಿಶ್ಚಿತವಾಗಿಯೂ ಸ್ಪರ್ಧೆ ಮಾಡುವೆ ಮತ್ತು ನನ್ನ ಗೆಲುವು ಕೂಡ ನಿಶ್ಚಿತ ಎಂದರು.
ರಾಜ್ಯದ ಮುಖ್ಯಮಂತ್ರಿಗಳು ಒಂದೊಂದು ವಿಧಾನ ಸಭಾ ಕ್ಷೇತ್ರಕ್ಕೆ 50 ಕೋಟಿ ವಿಶೇಷ ಅನುದಾನ ಬಿಡುಗಡೆಗೊಳಿಸಿದ್ದು, ಈ ಅನುದಾನದಲ್ಲಿ 25 ಕೋಟಿ ಲೋಕೋಪಯೋಗಿ ಇಲಾಖೆಗೆ, 12.5 ಪಂಚಾಯತ ರಾಜ್ಯ ಇಲಾಖೆಗೆ ಮತ್ತು ಇನ್ನುಳಿದ 12.5 ಕೋಟಿ ಶಾಸಕರ ನಿಧಿಗೆ ಹಂಚಿಕೆ ಮಾಡಲಾಗಿದೆ ಎಂದ ಅವರು ಇದೇ ಜುಲೈ 31 ರ ಒಳಗಾಗಿ ಮುಖ್ಯಮಂತ್ರಿಗಳಿಗೆ ಕಾಮಗಾರಿಗಳ ಪಟ್ಟಿ ಕೊಡಬೇಕು ಮತ್ತು ಈ ಎಲ್ಲ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಅಗಸ್ಟ 15 ರ ಒಳಗಾಗಿ ಪೂರ್ಣಗೊಳ್ಳಲಿದೆ ಎಂದರು.
ಚಮಕೇರಿ ಸಿಂಧೂರ ಗಡಿ ವರೆಗೆ 8.77 ಕಿಲೋ ಮೀಟರ, ರಸ್ತೆ ಸುಧಾರಣೆಗೆ 9 ಕೋಟಿ ಲೋಕೋಪಯೋಗಿ ಅನುದಾನದಲ್ಲಿ ಮತ್ತು ಪಂಚಾಯತ ರಾಜ ಇಲಾಖೆಯಡಿ 20 ಲಕ್ಷ ವೆಚ್ಚದ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿರುವೆ ಎಂದ ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ, ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಆದ್ಯತೆ ನೀಡುವೆ ಎಂದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಮಲ್ಲಿಕಾರ್ಜುನ ಮಗದುಮ್, ಜಿ.ಪಂ ಇಲಾಖೆಯ ವೀರಣ್ಣಾ ವಾಲಿ, ಧುರೀಣರಾದ ಬಸವರಾಜ ಪಾಟೀಲ, ರಫಿಕ್ ಪಟೇಲ್, ಅಮಸಿದ್ಧ ಮಂಗರೂಳ, ಬಸವರಾಜ ಮಗದುಮ್, ಸಿದ್ಧಾರೂಢ ನೇಮಗೌಡ, ಶಿವಪುತ್ರ ನಾಯಿಕ, ರಾಜು ಮರಡಿ, ಸೋಹಿತ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.