ಇಂಡಿ : ತಾಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ನ್ಯಾನೋ ಗೊಬ್ಬರ ಯೂರಿಯಾ ಲಭ್ಯವಿದ್ದು ಇದು ಸಹ ಪರಿಣಾಮಕಾರಿ ಮತ್ತು ಲಾಬದಾಯಕ ಎಂಬುದು ಕೃಷಿ ಇಲಾಖೆ, ಕೃಷಿ ವಿವಿಗಳು, ರೈತರು ನಡೆಸಿದ ಪ್ರಯೋಗಗಳಿಂದ ಸಾಬಿತಾಗಿದೆ. ಭವಿಷ್ಯದ ದೃಷ್ಟಿಯಿಂದ ರಸಗೊಬ್ಬರಗಳ ಬಳಕೆ ಪ್ರಮಾಣಕ್ಕಿಂತ ಹಸಿರು ಗೊಬ್ಬರ ಜೈವಿಕ ಗೊಬ್ಬರಗಳ ಬಳಕೆ ಹೆಚ್ಚಿಸಬೇಕಾದ ಅಗತ್ಯವಿದೆ. ಈ ಬಗ್ಗೆಯೂ ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ಹೇಳಿದರು.
ತಾಲೂಕಿನ ಹಲವಾರು ಕೃಷಿ ದಾಸ್ತಾನು ಮಳಿಗೆ ಗಳಿಗೆ ಭೇಟಿ ನೀಡಿ ರೈತರಿಗೆ ಮಾಹಿತಿ ನೀಡಿ ಮಾತನಾಡಿದರು.
ಪ್ರಸಕ್ತ ನ್ಯಾನೋ ಗೊಬ್ಬರ ಬಳಕೆಯಿಂದ ಪರಿಸರಕ್ಕೆ ಹಾನಿಯಾಗದೇ ಬೆಳೆಗಳಿಗೆ ಸಾರಜನಕ ಪೂರೈಸಲಿದೆ. ಗೊಬ್ಬರವನ್ನು ಎಲೆಗಳ ಮೇಲೆ ಸಿಂಪರಣೆ ಮಾಡಿದರೆ ಪೋಷಕಾಂಶದ ಸದ್ಬಳಕೆಯಾಗಲಿದೆ ಎಂದರು.
ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ಮಾತನಾಡಿ ನ್ಯಾನೋ ಯೂರಿಯಾ ಶೇ ೨೦ ರಷ್ಟು ಸಾರಜನಕ ಹೊಂದಿದೆ. ನ್ಯಾನೋ ಡಿ.ಎ.ಪಿ ಶೇ ೮ ಸಾರಜನಕ ಮತ್ತು ಶೇ ೧೬ ರಂಜಕ ಹೊಂದಿದೆ. ಹೀಗಾಗಿ ಬೆಳೆಗಳ ಬೆಳವಣೆಗೆಗೆ ಮತ್ತು ಅಭಿವೃದ್ದಿಗೆ ಪೋಷಕಾಂಶ ಒದಗಿಸಿ ಇಳುವರಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಡ್ರೋನ್ ಮೂಲಕ ಸಿಂಪಡಿಸಿದರೆ ಶೇ ೮೦ ರಷ್ಟು ಬೆಳೆಗಳಿಗೆ ತಲುಪಲಿದ್ದು ಕಡಿಮೆ ಖರ್ಚು ಕಡಿಮೆ ಶ್ರಮದ ಮೂಲಕ ಹೆಚ್ಚು ಬೆಳೆಗಳಿಗೆ ತಲುಪಲಿದೆ.
ಕೃಷಿ ಅಧಿಕಾರಿ ಮಹಾಂತೇಶ ಶೆಟ್ಟೆನವರ ಮತ್ತು ಪ್ರಗತಿಪರ ರೈತರು ಉಪಸ್ಥಿತರಿದ್ದರು.
ಹಸಿರು ಗೊಬ್ಬರ ಜೈವಿಕ ಗೊಬ್ಬರಗಳ ಬಳಕೆ ಹೆಚ್ಚಿಸಬೇಕಾದ ಅಗತ್ಯವಿದೆ : ಪವಾರ
