ಸಿಂದಗಿ: ಯುದ್ಧ ಯಾವಾಗಲು ನಡೆಯುದಿಲ್ಲ. ಆದರೆ ನಮ್ಮ ಯೋಧರು ಮಾತ್ರ ಯಾವಾಗಲೂ ಪ್ರಾಣಾರ್ಪಣೆಗೆ ಸಿದ್ದವಾಗಿಯೇ ಇರುತ್ತಾರೆ. ಇಂತಹ ಯೋಧರನ್ನು ಗೌರವಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.
ಸಿಂದಗಿ ಪಟ್ಟಣದ ಪಿಇಎಸ್ ಕಾಲೇಜಿನಲ್ಲಿ ಯುವ ಬ್ರಿಗೇಡ್ ವತಿಯಿಂದ ಕಾರ್ಗಿಲ್ ವಿಜಯ ದಿವಸ ನಿಮಿತ್ತ ಹಮ್ಮಿಕೊಂಡ ವಿಜಯ ಸಿಂಧೂರ ಕಾರ್ಯಕ್ರವನ್ನು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ದೇಶ ಮತ್ತ ದೇಶವಾಸಿಗಳ ಸಂರಕ್ಷಣೆಗಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ ಹಾಗೂ ೨೬ರ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಆಚರಣೆ ಮಾಡಲಾಗುವ ಈ ಸಂಭ್ರಮ ದೇಶಾಭಿಮಾನ, ಸೈನಿಕರ ಗೌರವದ ಸಂಕೇತ. ಕಾರ್ಗಿಲ್ ಯುದ್ಧದಲ್ಲಿ ಭಾರತ ಜಯಗಳಿಸಿ ೨೬ವರ್ಷ ಕಳೆದಿದೆ. ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂಧೂರ ನಡೆಸಿ ಮತ್ತೊಮ್ಮೆ ಭಾರತ ಪರಾಕ್ರಮ ಮೆರೆದಿದೆ. ಜು.೨೬ರಂದು ಕಾರ್ಗಿಲ್ ವಿಜಯೋತ್ಸವ ಹಾಗೂ ಆಪರೇಷನ್ ಸಿಂಧೂರ ವಿಜಯೋತ್ಸವ ಜಂಟಿಯಾಗಿ ಆಯೋಜನೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿದ ಅವರು, ಈ ವಿಜಯೋತ್ಸವ ಸಂಭ್ರಮವನ್ನು ಪ್ರತಿವರ್ಷ ಸಂಭ್ರಮ ಸಡಗರಗಳಿಂದ ಆಚರಸಿಕೊಂಡು ಬರಲಾಗುತ್ತಿದೆ. ದೇಶಕ್ಕಿಂತ ಪ್ರಮುಖವಾದದ್ದು ಯಾವುದು ಇಲ್ಲ. ದೇಶದ ರಕ್ಷಣೆಯ ವಿಷಯದಲ್ಲಿ ನಮ್ಮ ದೇಶದ ಪ್ರತಿ ಯೋಧರೂ ಕಠಿಬದ್ದರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ದೇಶದ ಪ್ರತಿ ವ್ಯಕ್ತಿಯ ನೆಮ್ಮದಿಯ ಬದುಕಿನ ಹಿಂದೆ ಸೈನಿಕರ ಸಹಕಾರವಿರುವುದನ್ನು ನಾವು ಸದಾ ನೆನಪಿಸಿಕೊಳ್ಳಬೇಕು ಎಂದ ಅವರು, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯ ನಮ್ಮ ವೀರಯೋಧರು ಪ್ರಾಣಾರ್ಪಣೆ ಮಾಡಿರುವುದು ನೋವನ್ನುಂಟು ಮಾಡುತ್ತದೆ. ಈ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕ ಹುತಾತ್ಮರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುವ ಪ್ರಮಾಣ ಕೈಗೊಳ್ಳಬೇಕು ಎಂದು ನುಡಿದರು.
ಇದೇ ಸಂದರ್ಭದಲ್ಲಿ ಯುವ ಬ್ರಿಗೇಡ್ ವಿಭಾಗ ಸಂಚಾಲಕ ರಾಜು ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಆಲಮೇಲ ತಹಶೀಲ್ದಾರ್ ಕೆ.ವಿಜಯಕುಮಾರ, ಕಾಲೇಜಿನ ಪ್ರಾಚಾರ್ಯ ಗುರು ಕಡಣಿ, ನಿವೃತ್ತ ಪ್ರಾಧ್ಯಾಪಕ ಪಿ.ಎಂ.ಮಡಿವಾಳ, ಶ್ರೀಶೈಲ ಜಾಮಾದಾರ, ಸಂಘಟನೆ ಜಿಲ್ಲಾ ಸಂಚಾಲಕ ಮಡಿವಾಳ ವಾಲಿಕಾರ, ನಿಂಗರಾಜ ಪಾಟೀಲ, ಮಹಾಂತೇಶ ಡಿಗ್ರಿ, ಸುರೇಶ ಜೋಗೂರ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ಯುವ ಬ್ರಿಗೇಡ್ ಸದಸ್ಯರು ಇದ್ದರು.