ಅಮೆರಿಕ ಮಾ26: ಅಮೆರಿಕದ ಬಾಲ್ಟಿಮೋರ್‌ನ ಅತಿ ಉದ್ದದ ಫ್ರಾನ್ಸಿಸ್ ಸ್ಕಾಟ್ ಸೇತುವೆ ದೊಡ್ಡ ಸರಕು ಹಡಗು ಡಿಕ್ಕಿ ಹೊಡೆದ ಪರಿಣಾಮ ಕುಸಿದು ಬಿದ್ದಿದೆ. ವರದಿಗಳ ಪ್ರಕಾರ, ಸೇತುವೆ ಕುಸಿಯುವ ಮೊದಲು ಬೆಂಕಿ ಹೊತ್ತಿಕೊಂಡಿತು ಮತ್ತು ಹಲವಾರು ವಾಹನಗಳು ಕೆಳಗಿರುವ ನೀರಿನಲ್ಲಿ ಬಿದ್ದವು ಎನ್ನುವ ಮಾಹಿತಿ ಲಭ್ಯವಾಗಿದೆ.
ಸೇತುವೆ ಕುಸಿದಾಗ ಸುಮಾರು ಏಳು ಮಂದಿ ಕಟ್ಟಡ ಕಾರ್ಮಿಕರು ಮತ್ತು ಮೂರ್ನಾಲ್ಕು ನಾಗರಿಕ ವಾಹನಗಳು ಸೇತುವೆ ಮೇಲೆ ಇದ್ದವು ಎಂದು ಹೇಳಲಾಗಿದೆ. ಘಟನೆಯ ನಂತರ ಸೇತುವೆಯನ್ನು ವಾಹನ ಸಂಚಾರಕ್ಕೆ ಬಂದ್ ಮಾಡಲಾಗಿದೆ. ಸುರಕ್ಷತಾ ಕಾರಣಗಳಿಗಾಗಿ ಅಧಿಕಾರಿಗಳು ಎರಡೂ ದಿಕ್ಕುಗಳಲ್ಲಿ ಎಲ್ಲಾ ಲೇನ್‌ಗಳನ್ನು ಮುಚ್ಚಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಾವುನೋವುಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 47 ವರ್ಷಗಳಷ್ಟು ಹಳೆಯದಾದ ಸೇತುವೆ ಇದಾಗಿದೆ.
ವರದಿಗಳ ಪ್ರಕಾರ ಸೇತುವೆಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಹಡಗು ಕಂಟೈನರ್ ಹಡಗು. ‘ಡಾಲಿ’ ಹೆಸರಿನ ಈ ಹಡಗು ಬಾಲ್ಟಿಮೋರ್‌ನಿಂದ ಶ್ರೀಲಂಕಾದ ರಾಜಧಾನಿ ಕೊಲಂಬೊಗೆ ಹೋಗುತ್ತಿತ್ತು. ರಾತ್ರಿ 1:30ರ ಸುಮಾರಿಗೆ ಹಡಗು ಸೇತುವೆಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ಇದರ ನಂತರ ಹಡಗು ನೀರಿನಲ್ಲಿ ಮುಳುಗಿತು ಮತ್ತು ಸೇತುವೆಯೂ ಮುರಿದು ನದಿಗೆ ಬಿದ್ದಿತು.
ಈ ಸೇತುವೆಯನ್ನು ಬಾಲ್ಟಿಮೋರ್ ಬಂದರಿನಲ್ಲಿ ಪಟಾಪ್ಸ್ಕೋ ನದಿಯ ಮೇಲೆ ನಿರ್ಮಿಸಲಾಗಿದೆ. ಸುಮಾರು 3 ಕಿಲೋಮೀಟರ್ ಉದ್ದದ ಈ ಸೇತುವೆಯ ನಿರ್ಮಾಣವು 1972 ರಲ್ಲಿ ಪ್ರಾರಂಭವಾಯಿತು ಮತ್ತು ಸೇತುವೆಯನ್ನು 1977 ರಲ್ಲಿ ಸಂಚಾರಕ್ಕೆ ತೆರೆಯಲಾಯಿತು. ಪ್ರತಿ ವರ್ಷ ಸರಾಸರಿ 1.1 ಕೋಟಿ ವಾಹನಗಳು ಈ ಸೇತುವೆಯ ಮೂಲಕ ಹಾದು ಹೋಗುತ್ತವೆ. ಈ ಸೇತುವೆಯನ್ನು ಕೀ ಸೇತುವೆ ಎಂದೂ ಕರೆಯಲಾಗುತ್ತಿತ್ತು.