ಮಕ್ಕಳ ಸಾಹಿತ್ಯ ಪರಿಪೂರ್ಣ ಸಾಹಿತ್ಯ : ಫ.ಗು.ಸಿದ್ದಾಪೂರ

Ravi Talawar
ಮಕ್ಕಳ ಸಾಹಿತ್ಯ ಪರಿಪೂರ್ಣ ಸಾಹಿತ್ಯ : ಫ.ಗು.ಸಿದ್ದಾಪೂರ
Oplus_131072
WhatsApp Group Join Now
Telegram Group Join Now

ಬಾಗಲಕೋಟೆ : ಜು24:  ಪ್ರೌಢ ಸಾಹಿತ್ಯದಲ್ಲಿ ಇರುವ ಎಲ್ಲ ವಿಷಯಗಳು ಮಕ್ಕಳ ಸಾಹಿತ್ಯದಲ್ಲಿ ಇರುವುದರಿಂದ ಪ್ರೌಢ ಸಾಹಿತ್ಯಕ್ಕಿಂತ ಮಕ್ಕಳ ಸಾಹಿತ್ಯ ಪರಿಪೂರ್ಣವಾಗಿರುತ್ತದೆ ಎಂದು ವಿಜಯಪುರ ಜಿಲ್ಲೆಯ ಮಕ್ಕಳ ಸಾಹಿತಿ ಫ.ಗು.ಸಿದ್ದಾಪೂರ ಹೇಳಿದರು.

ಅವರು ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ ಮತ್ತು ಕರ್ನಾಟಕ ಜಾನಪದ ಪರಿಷತ್ತು ಬಾಗಲಕೋಟೆ ಇವುಗಳ ಸಂಯುಕ್ತಶ್ರಯದಲ್ಲಿ ಆರ್.ಸಿ.ಚಿತ್ತವಾಡಗಿ ಅವರ ವಯೋನಿವೃತ್ತಿ ನಿಮಿತ್ತ ಹಮ್ಮಿಕೊಂಡಿದ್ದ ಪದ್ಮಶ್ರೀ ಡಾ.ವೆಂಕಪ್ಪ ಸುಗತೇಕರ ಅವರಿಗೆ ಸನ್ಮಾನ, ಆರ್.ಸಿ.ಚಿತ್ತವಾಡಗಿ ಅವರ ಬೆದರು ಬೊಂಬೆ ಕೃತಿ ಲೋಕಾರ್ಪಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಿ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಳಸಪ್ರಾಯವಾದ ಸಾಕಷ್ಟು ಸಾಹಿತ್ಯ ಕೃತಿಗಳು ಇವೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿಗಳು, ರಾಮಾಯಣ, ಮಹಾಭಾರತ ಸೇರಿದಂತೆ ಇನ್ನೂ ಅನೇಕ ಪ್ರೌಢ ಕೃತಿಗಳು ಇವೆ. ಇವುಗಳು ಮಕ್ಕಳಿಗೆ ಸರಳವಾಗಿ ಅರ್ಥವಾಗದಿರಬಹುದು. ಆದರೆ ಮಕ್ಕಳ ಸಾಹಿತ್ಯ ಮಾತ್ರ ಮಕ್ಕಳಿಗೆ ಸರಳವಾಗಿ ಅರ್ಥವಾಗುವುದರಿಂದ ಹಾಗೂ ಆ ಸಾಹಿತ್ಯವನ್ನು ಅನುಭವಿಸಿ, ಹಾಡಿ, ಕುಣಿದು ಆನಂದ ಪಡುವುದರಿಂದ ಅಲ್ಲದೇ ಮಕ್ಕಳ ಸಾಹಿತ್ಯಕ್ಕೆ ಎಲ್ಲ ವಯೋಮಾನದವರ ಪ್ರೀತಿ ಕಂಡುಬರುವುದರಿಂದ ಮಕ್ಕಳ ಸಾಹಿತ್ಯವೇ ಪರಿಪೂರ್ಣ ಸಾಹಿತ್ಯವಾಗಿದೆ. ಆರ್,ಸಿ. ಚಿತ್ತವಾಡಗಿ ಅವರ ಶಿಶು ಗೀತೆಗಳಿರುವ ಬೆದರು ಬೊಂಬೆ ಕೃತಿಯೂ ಮಕ್ಕಳ ಮೆಚ್ಚಿನ ಗೀತೆಗಳಾಗಿವೆ ಎಂದರು.

ಉಪನ್ಯಾಸಕಿ ಸುಮಂಗಲಾ ಮೇಟಿ ಕೃತಿ ಅವಲೋಕನ ಮಾಡಿ ಮಾತನಾಡಿ, ಶಿಶು ಗೀತೆಗಳನ್ನು ಒಳಗೊಂಡಿರುವ ಬೆದರುಬೊಂಬೆ ಕೃತಿಯು ಈಗಾಗಲೇ ಶಾಲಾ ಮಕ್ಕಳಿಗೆ ಹಾಡಿಸಿ ಮೆಚ್ಚುಗೆಗೆ ಪಾತ್ರವಾಗಿರುವ ಗೀತೆಗಲಾಗಿವೆ. ಮಕ್ಕಳನ್ನು ಪ್ರೀತಿಸುವ ಗುಣವಿರುವ ಚಿತ್ತವಾಡಗಿ ಅವರು ತಮ್ಮ ಭೋದನಾ ಸಂದರ್ಭದಲ್ಲಿ ಕಂಡ ಮಕ್ಕಳ ಮನಸ್ಸಿನ ಅಂತಶಕ್ತಿಯನ್ನು ಅರಿತು ಗೀತೆ ಬರೆದಿದ್ದಾರೆ. ಕೌಶಲ, ಜ್ಞಾನ ಇವುಗಳನ್ನು ಬಳಸಿ ಮಕ್ಕಳ ಪ್ರತಿಭೆ ಅನಾವರಣ ಮಾಡುವುದೇ ಶಿಕ್ಷಕರ ಗುಣವಾಗಿರಬೇಕು. ಅದನ್ನು ವೃತ್ತಿಯಿಂದ ಮಾಡಿ ತೋರಿಸಿದ ಚಿತ್ತವಾಡಗಿ ಅವರು ಗೀತೆಗಳ ಮೂಲಕ ಅನುಭವ ಹಂಚಿಕೊಂಡು ಬರೆದಿದ್ದಾರೆ. ಕೃತಿಯಲ್ಲಿರುವ ಅರವತ್ತು ಗೀತೆಗಳು ಮಕ್ಕಳ ಮನಸ್ಸಿನ ತೊಳಲಾಟ, ಅವರ ಆಸಕ್ತಿ, ಬೆಳವಣಿಗೆ, ಗುರುಪ್ರೀತಿ, ಮಾತೃ, ಪಿತೃ ಗುಣ ಹೊಂದುವ ಪರಿ ಇತ್ಯಾದಿಗಳ ಭಾವನೆಗಳ ಅಭಿವ್ಯಕ್ತಿಯೇ ಈ ಕೃತಿಯಾಗಿದೆ. ಶಿಕ್ಷಕ ಮಕ್ಕಳ ಮನಸ್ಸನು ಅರಿತು ಪಾಠ ಮಾಡಬೇಕಾದಾಗ ಅವನಲ್ಲಿ ಈ ಎಲ್ಲ ಕೌಶಲಗಳು ಇರಬೇಕು ಎಂದರು.

ಡಿಡಿಪಿಐ ಎಚ್.ಜಿ.ಮಿರ್ಜಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಶಿಕ್ಷಕನಾದವನು ಮಕ್ಕಳಿಗೆ ಪಾಠಭೋದನೆ ಮಾಡುವುದರ ಜೊತೆಗೆ ಅವರ ಬದುಕನ್ನು ಸುಂದರವಾಗಿ ಕಟ್ಟಿಕೊಡುವ ಕೌಶಲ ಹೊಂದಿರಬೇಕು. ಮಕ್ಕಳಲ್ಲಿ ಉತ್ತಮ ಕನಸುಗಳನ್ನು ಬಿತ್ತಬೇಕು. ಅಂದಾಗ ವೃತ್ತಿ ಸಾರ್ಥಕತೆಯಾಗುತ್ತದೆ. ಶಿಕ್ಷಕನಿಗೂ ಗೌರವ ಸಿಗುತ್ತದೆ. ಚಿತ್ತವಾಡಗಿ ಅವರ ಪರಿಶ್ರಮದ ಬೋಧನೆಯಿಂದ ಮಕ್ಕಳ ಬದುಕು ಸಾರ್ಥಕವಾಗಿದೆ. ಅವರ ನಿವೃತ್ತಿ ಬದುಕು ಇದೇ ರೀತಿ ಸಮಾಜಮುಖಿಯಾಗಿ ಮುಂದುವರೆಯಲಿ ಎಂದು ಹಾರೈಸಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಶಿರೂರ ಶಿವಯೋಗಾಶ್ರಮದ ಅಭಿನವ ಸಿದ್ಧಲಿಂಗ ಶ್ರೀಗಳು ಸಾನಿಧ್ಯವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಬಾಗಲಕೋಟೆಯ ಡಾ. ವೆಂಕಪ್ಪ ಸುಗತೇಕರ ಅವರಿಗೆ ಹಾಗೂ ೬೦ ಜನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಲ್ಲಿಕಾರ್ಜುನ ಶೆಲ್ಲಿಕೇರಿ, ಎನ್.ಜಿ.ಗೊರವರ, ಮಹಾದೇವ ಕಂಬಾಗಿ, ಡಾ.ಬಸವರಾಜ ಕಟಗೇರಿ, ವೈ.ಎಚ್.ಕಾತರಕಿ, ಡಾ.ಗಿರೀಶ ಮಾಸೂರಕರ್, ಎಸ್.ಬಿ.ಮಾಚಾ, ಮಹಾಬಳೇಶ್ವರ ಗುಡಗುಂಟಿ, ಬಸವರಾಜ ಮಠದ ಸೇರಿದಂತೆ ಇನ್ನೂ ಅನೇಕ ಸಾಧಕರಿಗೆ ಸನ್ಮಾನ ಮಾಡಲಾಯಿತು. ಡಾ.ಸಿ.ಎಂ.ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮೇಶ ಸಣ್ಣತಂಗಿ ಅಭಿನಂದನಾಪರ ನುಡಿಗಳನ್ನಾಡಿದರು. ಡಾ.ಪ್ರಕಾಶ ಖಾಡೆ ನಿರೂಪಿಸಿದರು. ಎಂ.ಎಸ್.ಕಲಗುಡಿ ಪ್ರಾರ್ಥಿಸಿದರು ಆನಂದ ಹಲಕುರ್ಕಿ ವಂದಿಸಿದರು.
.

 

WhatsApp Group Join Now
Telegram Group Join Now
Share This Article