ನವದೆಹಲಿ, ಜುಲೈ 18: ಯೆಮೆನ್ನಲ್ಲಿ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಪ್ರಕರಣದ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ 14ಕ್ಕೆ ಮುಂದೂಡಿದೆ. ಯೆಮನ್‌ನಲ್ಲಿ ಮರಣದಂಡನೆ ಶಿಕ್ಷೆಯಲ್ಲಿರುವ ಭಾರತೀಯ ನರ್ಸ್‌ನ ಮರಣದಂಡನೆಯನ್ನು ತಡೆಯಲು ರಾಜತಾಂತ್ರಿಕ ಮತ್ತು ಕಾನೂನು ಪ್ರಯತ್ನಗಳಿಗೆ ಹೆಚ್ಚಿನ ಸಮಯವನ್ನು ನೀಡಲಾಗಿದೆ.
ನಿಮಿಷಾ ಪ್ರಿಯಾ ಯಾರು? ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲೆಂಗೋಡ್‌ನ 38 ವರ್ಷದ ನರ್ಸ್ ನಿಮಿಷಾ ಪ್ರಿಯಾ, 2017 ರಲ್ಲಿ ಯೆಮೆನ್ ಪ್ರಜೆಯ ಕೊಲೆ ಮಾಡಿ ಶಿಕ್ಷೆಗೊಳಗಾದರು.2020 ರಲ್ಲಿ, ಅವರಿಗೆ ಯೆಮೆನ್ ನ್ಯಾಯಾಲಯವು ಮರಣದಂಡನೆ ವಿಧಿಸಿತು ಮತ್ತು ಅವರ ಅಂತಿಮ ಮೇಲ್ಮನವಿಯನ್ನು ದೇಶದ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ 2023 ರ ನವೆಂಬರ್‌ನಲ್ಲಿ ತಿರಸ್ಕರಿಸಿತು. ಅವರು ಪ್ರಸ್ತುತ ಇರಾನ್ ಬೆಂಬಲಿತ ಹೌತಿ ಬಂಡುಕೋರರಿಂದ ನಿಯಂತ್ರಿಸಲ್ಪಡುವ ರಾಜಧಾನಿ ಸನಾದಲ್ಲಿ ಬಂಧನದಲ್ಲಿದ್ದಾರೆ.