ಬೆಂಗಳೂರು, ಜುಲೈ 18: ಕರ್ನಾಟಕದ ಗೃಹ ಸಚಿವ ಡಾ. ಜಿ ಪರಮೇಶ್ವರ ‘ಮನೆ ಮನೆಗೆ ಪೊಲೀಸ್’ ಯೋಜನೆಗೆ ಬೆಂಗಳೂರಿನಲ್ಲಿ ಶುಕ್ರವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮನೆ ಮನೆಗೆ ಪೊಲೀಸರು ಭೇಟಿ ನೀಡುವ ಯೋಜನೆ ಇಡೀ ದೇಶದಲ್ಲಿ ಇದೇ ಮೊದಲು. ಈ ವಿನ್ಯಾಸದ ಕಾರ್ಯಕ್ರಮದ ಮೂಲಕ, ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಕಾನೂನು ಸಂಬಂಧಿತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಪೊಲೀಸ್ ಇಲಾಖೆಗೆ ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಲು ಸಹಾಯವಾಗಲಿದೆ ಎಂದರು.
‘ಮನೆ ಮನೆಗೆ ಪೊಲೀಸ್’ಯೋಜನೆಗೆ ಪರಮೇಶ್ವರ ಚಾಲನೆ

ಪೊಲೀಸರು ಜನಸ್ನೇಹಿ ಆಗಬೇಕು ಎಂದು ಈ ಕಾರ್ಯಕ್ರಮ ಶುರು ಮಾಡುತ್ತಿದ್ದೇವೆ. ನಾವೇ ಜನರ ಮನೆ ಬಾಗಿಲಿಗೆ ಕಷ್ಟ ಕೇಳೋಣ ಅಂತ ತೀರ್ಮಾನ ಮಾಡಿದ್ದೇವೆ. ಪ್ರತಿ ಠಾಣೆಯ ಲಿಮಿಟ್ಸ್ ನಲ್ಲಿ ಈ ಕೆಲಸ ಆಗಬೇಕು. ಬೀಟ್ ಪೊಲೀಸರು ಈ ಕೆಲಸವನ್ನು ಮಾಡಬೇಕು. ಯಾರ ಮನೆಯಲ್ಲಿ ಯಾರಿದ್ದಾರೆ, ಹೊಸದಾಗಿ ಬಂದಿದ್ದಾರ, ಬಾಡಿಗೆಗೆ ಇದ್ದಾರೆಯೇ, ಅವರು ಏನ್ ಕೆಲಸ ಮಾಡ್ತಾರೆ ಎಂಬ ಮಾಹಿತಿ ಕಲೆಹಾಕಿದ್ರೆ ಇಡೀ ಬೆಂಗಳೂರು ಡೇಟಾ ಬ್ಯಾಂಕ್ ನಮ್ಮ ಬಳಿ ಇರುತ್ತದೆ. ಪೊಲೀಸರು ಬಂದಾಗ ಜನರು ಕಷ್ಟಸುಖ ಹೇಳಬಹುದು. ಏನಾದ್ರೂ ತೊಂದರೆ ಆಗ್ತಾ ಇದ್ದರೆ ಹೇಳಬಹುದು. ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದರೆ ಮಾಹಿತಿ ನೀಡಬಹುದು. ಜನಸ್ನೇಹಿ ಪೊಲೀಸರ ಜೊತೆಗೆ ಶಾಂತಿ ಕಾಪಾಡಲು ಈ ಕಾರ್ಯಕ್ರಮ ಸಹಾಯ ಆಗುತ್ತದೆ. ನಿಮ್ಮ ಮನೆಗೆ ಬಂದಾಗ ನಿಮ್ಮ ಹೆಸರನ್ನು ನಮೂದಿಕೊಳ್ಳುತ್ತಾರೆ. ಬಳಿಕ ಅದನ್ನ ಡಿಜಿಟಲೈಸ್ ಮಾಡಿ ಇಟ್ಟುಕೊಳ್ಳುತ್ತಾರೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.