ಕುಕನೂರು: ನಮ್ಮ ಭರತ ಖಂಡ ಹಲವಾರು ವೈವಿಧ್ಯತೆಯಿಂದ ಕೂಡಿದ ದೇಶವಾಗಿದ್ದು ಒಂದೊಂದು ಭಾಗಗಳಲ್ಲಿ ಒಂದೊಂದು ನಂಬಿಕೆಗಳಿಂದ ದೇವರ ನಾಮ ಸ್ಮರಣೆ ಪೂಜೆ, ಪುನಸ್ಕಾರಗಳು ನೆರವೆರುತ್ತವೆ.
ನಮ್ಮ ಉತ್ತರ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಲವಾರು ಸಂಪ್ರದಾಯ, ಪೂಜೆ, ಪುನಸ್ಕಾರಗಳ ಮೂಲಕ ದೇವರ ಮೊರೆಹೋಗುವುದು ಮೊದಲಿನಿಂದಲೂ ನಡೆದುಕೊಂಡ ಬಂದ ವಾಡಿಕೆಯಾಗಿದೆ.
ಇಲ್ಲಿ ಜಾತಿ ಮತಗಳನ್ನು ಮೀರಿ ಸೌಹಾರ್ದಯುತವಾಗಿ ಬದುಕು ನಡೆಸುವ ಜನಗಳು ಕಾಣ ಸಿಗುತ್ತಾರೆ. ಅದರಲ್ಲೂ ವಿಷೇಶವಾಗಿ ರೈತಾಪಿ ವರ್ಗದವರಲ್ಲಿ ಕಾಣಬಹುದಾಗಿದೆ.ಪ್ರತಿ ವರ್ಷ ಬಿತ್ತನೆ ಸಮಯಕ್ಕೆ ಉತ್ಸುಕತೆಯಿಂದ ಎಲ್ಲಾ ತಯಾರಿ ನಡೆಸಿ ಪ್ರಯಾಸದಿಂದ ಸಾಲ ಸೂಲ ಮಾಡಿ ಬಿತ್ತನೆ ಮಾಡಿ ಉತ್ತಮ ಆದಾಯ ಪಡೆಯುವ ನಿರೀಕ್ಷೆಯಲ್ಲಿ ರೈತರಿರುತ್ತಾರೆ ಆದರೆ ವರುಣನ ಮುನಿಸು ಇವರ ಆಸೆಗೆ ಭಗ್ನ ತರುವುದರಿಂದ ರೈತರಿಗೆ ಗರ ಸಿಡಿಲು ಬಡಿದಂತಾಗುತ್ತದೆ.
ಅದಕ್ಕೆ ವರುಣನನ್ನು ಧರೆಗೆ ಆಹ್ವಾನಿಸಲು ಕುಕನೂರು ತಾಲೂಕಿನ ವಿರಾಪೂರ ಗ್ರಾಮದ ರೈತರು ವಿಷೇಶವಾಗಿ ಗುರ್ಜಿ ಪೂಜೆ ಆಚರಿಸುವ ಮೂಲಕ ವರುಣ ದೇವನನ್ನು ಪೂಜಿಸುವ ಸಂಪ್ರದಾಯ ಈ ಭಾಗದಲ್ಲಿ ಪ್ರಚಲಿತದಲ್ಲಿದೆ.
ಕೆಲವೊಂದೆಡೆ ಮಳೆಗಾಗಿ ಕಪ್ಪೆ ಮದುವೆ, ಕತ್ತೆ ಮದುವೆ ಮಾಡಿಸುವುದರಿಂದಲೂ ಮಳೆ ಬಂದಂತಹ ಸಾಕಷ್ಟು ನಿದರ್ಶನಗಳು ಪ್ರಸ್ತುತ.
ಆದರೆ ಈ ಗುರ್ಜಿ ಪೂಜೆ ಎಂದರೇನು,,? ಎಂದು ಕೇಳುವದು ಉಂಟು. ಗುರ್ಜಿ ಪೂಜೆ ಮಾಡಿದರೇ ಖಂಡಿತ ಮಳೆಯಾಗುತ್ತದೆ ಎನ್ನುವ ನಂಬಿಕೆ ಗತ ಕಾಲದಿಂದಲೂ ಈ ಭಾಗದಲ್ಲಿ ನಡೆದುಕೊಂಡು ಬಂದ ಪದ್ದತಿಯಾಗಿದೆ.
ಕುಕನೂರು ತಾಲೂಕಿನ ವೀರಾಪೂರ ಗ್ರಾಮದ ರೈತರಾದ ಶರಣಪ್ಪ ಅಂಗಡಿಯವರು ಗುರ್ಜಿ ಹೊತ್ತು ಸಹಚರರೊಂದಿಗೆ ಮಳೆಗಾಗಿ ಈ ಗುರ್ಜಿ ಪೂಜೆಯನ್ನು ನಡೆಸುತ್ತಾರೆ.
ತಲೆ ಮೇಲೆ ಹಂಚು ಇಟ್ಟು ಅದರ ಮೇಲೆ ಬೆರಣಿ ಮಾಡಿ ಇಟ್ಟುಕೊಂಡು ಮನೆಮನೆಗೆ ತೆರಳಿ ತಲೆ ಮೇಲೆ ಇಟ್ಟಿರುವ ಗುರ್ಜಿಗೆ ಮನೆಯವರಿಂದ ತುಂಬಿದ ಕೊಡದಿಂದ ನೀರು ಹಾಕಿಸಿಕೊಳ್ಳುತ್ತಾ ಸುತ್ತು ಹಾಕುತ್ತಾ,, ಈ ಪದ ಹೇಳುವುದುಂಟು.
*ಗುರ್ಜಿ ಗುರ್ಜಿ ಹಳ್ಳ ಕೊಳ್ಳ ತಿರುಗಾಡಿ ಹಿರಕಟ್ಟನ್ಯಾಗ ಹಿರಾಡಿ ಬಂದೆ ಹಗ್ಗ ಕೋಡತ್ತೀನಿ ಬಾ ಮಳೆಯೋ ಬಣ್ಣ ಕೋಡತೀನಿ ಬಾ ಮಳೆಯೋ ಸುಣ್ಣ ಕೋಡತೀನಿ ಸುರಿ ಮಳೆಯೋ ಕಪತ್ ಮಳೆಯೋ ಖಾರ ಮಳೆಯೋ ಬೇಗಿನ ಕಡೆಗೆ ಬಾ ಮಳೆಯೋ ಬಾ ಮಳೆಯೋ,,,*
ಎಂದು ಮಳೆಯನ್ನು ಕರೆಯುತ್ತಾ ನೀರನ್ನು ಹಾಕಿಸಿಕೊಳ್ಳುತ್ತಾರೆ. ಇದರಿಂದ ಮಳೆ ಆಗುವ ಭರವಸೆ ನಮ್ಮ ರೈತ ಕುಲ ಬಾಂಧವರಲ್ಲಿ ಅಚ್ಚಳಿಯದೇ ಉಳಿದ ಸಂಪ್ರದಾಯವಾಗಿದೆ.
ಈ ಪೂಜೆಯ ಆಚರಣೆಯಲ್ಲಿ ವೀರಾಪೂರ ಗ್ರಾಮದ ಮಂಜುನಾಥ ಕೊಪ್ಪದ, ಮೈಲಾರಗೌಡ, ಪ್ರಶಾಂತ ಉಳ್ಳಾಗಡ್ಡಿ, ಶಿವಾನಂದಪ್ಪ ಮೇಟಿ, ಕಲ್ಲೇಶ ಉಳ್ಳಾಗಡ್ಡಿ, ಈರಣ್ಣ ಉಳ್ಳಾಗಡ್ಡಿ, ಈರಣ್ಣ ಸಂಗಮೇಶ್ವರ, ಕಲ್ಲಯ್ಯ ಸೊಪ್ಪಿಮಠ, ಬಸಲಿಂಗಯ್ಯ ಹಿರೇಮಠ, ಶರಣಪ್ಪ ಜಿಗಳೂರ, ಬಸವರಾಜ ಬ್ಯಾಳಿ, ಆನಂದ ವಡ್ಡರ, ಮಹೇಶ ಪೋಲಿಸ್ ಪಾಟೀಲ್ ಸೇರಿದಂತೆ ವೀರಾಪೂರ ಗ್ರಾಮದ ಗುರು ಹಿರಿಯರು ಯುವಕ ಮಿತ್ರರು ಇದ್ದರು.