ಬೀದರ/ಚಿಟಗುಪ್ಪಾ : ಕನ್ನಡ ಭಾಷೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಬಹಳಷ್ಟು ಅನೇಕ ಕ್ರಮಗಳನ್ನು ಕೈಗೊಳ್ಳುವುದು ಇಂದಿನ ದಿನಗಳಲ್ಲಿ ಅವಶ್ಯಕತೆ ಇದೆ. ಕರ್ನಾಟಕದಲ್ಲಿಯೇ ಕನ್ನಡ ಉಳಿಯದೆ ಹೋದರೆ ಬೇರೆ ಇನ್ನೆಲ್ಲಿ ಉಳಿಯಲು ಸಾಧ್ಯ? ಈ ಹಿನ್ನೆಲೆಯಲ್ಲಿ ಪ್ರಯತ್ನಗಳು ನಡೆಯುತ್ತಿರುವಾಗ ಕೆಲ ಮುಖಂಡರು ಬೆಳಗಾವಿಯ ಮೇಯರ್ ಮಂಗೇಶ ಪವಾರ ಅವರಿಗೆ ‘ಬೆಳಗಾವಿ ನಗರ’ದಲ್ಲಿ ಕನ್ನಡ ಕಡ್ಡಾಯ ಜಾರಿ ಮಾಡುವುದನ್ನು ವಿರೋಧಿಸಿ ಮನವಿ ಪತ್ರ ಸಲ್ಲಿಸಿರುವುದು ಅತ್ಯಂತ ಆಘಾತಕಾರಿಯಾದ ಘಟನೆಯಾಗಿದೆ
ಎಂದು ಬರಹಗಾರರು , ಕನ್ನಡ ಹೋರಾಟಗಾರರಾದ ಸಂಗಮೇಶ ಎನ್ ಜವಾದಿಯವರು ತಮ್ಮ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ. ಕನ್ನಡ ಉಳಿವು ಮತ್ತು ಬೆಳವಣಿಗೆಗೆ ಗಡಿ ಭಾಗದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಗಳು,ಕುಂಟು ನೆಪಗಳು, ಕಂಟಕಗಳು ನಿರಂತರವಾಗಿ ಮೂಡಿ ಬರುತ್ತಿದ್ದು ಕರ್ನಾಟಕ ಸರ್ಕಾರ ಇದನ್ನು ಎದುರಿಸುವಲ್ಲಿ ದೃಢವಾದ ಇಚ್ಚಾ ಶಕ್ತಿಯನ್ನು ತೋರಬೇಕೆಂದು ಅವರು ಹೇಳಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕರುನಾಡಿನ ಅಚ್ಚಗನ್ನಡದ ನೆಲ ಬೆಳಗಾವಿ. ಬೆಳಗಾವಿಯು ವಿಧಾನ ಮಂಡಲದ ಅಧಿವೇಶನದ ಸ್ಥಳವಾಗುವ ಮೂಲಕ ಎರಡನೆಯ ರಾಜಧಾನಿ ಎನಿಸಿಕೊಂಡಿದೆ. ಆ ಜಿಲ್ಲೆಯು ಅತ್ಯಂತ ಪುರಾತನ ಜಿಲ್ಲೆ ಎಂಬ ಕೀರ್ತಿಗೆ ಭಾಜನವಾಗಿದೆ.
ಅಲ್ಲಿನ ತಾಮ್ರದ ಫಲಕಗಳ ಶಾಸನಗಳ ಪ್ರಕಾರ, ಒಂದೊಮ್ಮೆ ಕದಂಬ ರಾಜರುಗಳ ರಾಜಧಾನಿಯಾಗಿತ್ತು ಎನ್ನುವುದು ಸಹ ತಿಳಿದು ಬರುತ್ತದೆ. ಇಂತಹ ಕನ್ನಡಪರ ಹಿನ್ನೆಲೆಯುಳ್ಳ ಸ್ಥಳವನ್ನು ಕೆಲ ಕನ್ನಡ ಭಾಷಾ ದ್ರೋಹಿ ಸಂಘಟನೆಗಳು ತಮ್ಮ ಪುಂಡಾಟಿಕೆ ಸ್ಥಳವಾಗಿಸಿ ಕೊಂಡಿರುವುದು ನಿಜಕ್ಕೂ ಬೇಸರದ ಹಾಗೂ ದುರಂತದ ಸಂಗತಿಯಾಗಿದೆ. ಕಾರಣ ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಬೆಳಗಾವಿಯಲ್ಲಿ ಕನ್ನಡಿಗರು ತಮ್ಮ ಹಕ್ಕುಗಳನ್ನು ಪಡೆದು ಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು. ಈ ದಿಸೆಯಲ್ಲಿ ಕನ್ನಡ ಪರ ಇರುವ ನಾಡಿನ ಎಲ್ಲಾ ಸಂಘಟನೆಗಳು ಒಂದಾಗಿ, ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದು ಸಂಗಮೇಶ ಎನ್ ಜವಾದಿ ವಿನಂತಿಸಿದ್ದಾರೆ.