ಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಐದು ಹುಲಿಗಳ ಸಾವಿಗೆ ಕೀಟನಾಶಕ ಕಾರಣವೆಂದು ಉನ್ನತ ಮಟ್ಟದ ತನಿಖಾ ಸಮಿತಿಯ ಅಂತಿಮ ವರದಿಯಲ್ಲಿ ಉಲ್ಲೇಖವಾಗಿದೆ. ಹುಲಿಗಳ ಸಾವಿಗೆ ಸಂಬಂಧಿಸಿದಂತೆ ರಚಿಸಿದ್ದ ಉನ್ನತ ಮಟ್ಟದ ತನಿಖಾ ಸಮಿತಿಯು ಈಗಾಗಲೇ ಅಂತಿಮ ವರದಿಯನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಸಲ್ಲಿಸಿದೆ.
ಹಸು ಹಾಗೂ ಐದು ಹುಲಿಗಳ ಅಂಗಾಂಗ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದ ವೇಳೆ ಕಾರ್ಬೋಫ್ಯುರಾನ್ ಎಂಬ ಕೀಟನಾಶಕ ಪತ್ತೆಯಾಗಿದ್ದು, ವಿಷಕಾರಿ ಕೀಟನಾಶಕ ಮಿಶ್ರಿತ ಹಸುವಿನ ಮಾಂಸ ತಿಂದು ಐದು ಹುಲಿಗಳು ಅಸುನೀಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಕುರಿತು ಪರಿಸರವಾದಿ ಜೋಸೆಫ್ ಹೂವರ್ ಮಾಹಿತಿ ಹಂಚಿಕೊಂಡಿದ್ದು, ಕಾರ್ಬೋಪ್ಯೂರನ್ ಕೀಟನಾಶಕವನ್ನು ಬೇಟೆಗಾರರೇ ಅತ್ಯಧಿಕವಾಗಿ ಬಳಸುತ್ತಾರೆ. ಇದರ ಬಗ್ಗೆ ತಿಳಿದೇ ಆರೋಪಿಗಳು ಹುಲಿಗಳನ್ನು ಕೊಂದಿದ್ದಾರೆ. ಅರಣ್ಯ ಇಲಾಖೆ ಮತ್ತು ಸರ್ಕಾರಗಳು ಕಾಡಿನ ರಕ್ಷಣೆ ಮತ್ತು ವನ್ಯಜೀವಿ ರಕ್ಷಣೆಯಲ್ಲಿ ಹೊಸ ವಿಧಾನ ಕಂಡುಕೊಳ್ಳಬೇಕಿದೆ ಎಂದಿದ್ದಾರೆ.