ಕೋಯಿಕ್ಕೋಡ್(ಕೇರಳ): ಯೆಮೆನ್ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಪ್ರಕರಣದಲ್ಲಿ ಪ್ರಭಾವಿ ಸುನ್ನಿ ಮುಸ್ಲಿಂ ನಾಯಕ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ಮಧ್ಯಪ್ರವೇಶಿಸಿದ್ದಾರೆ. ತಕ್ಷಣದ ಶಿಕ್ಷೆಯನ್ನು ತಪ್ಪಿಸುವ ಬಗ್ಗೆ ಕೊನೆಯ ಕ್ಷಣದ ಪ್ರಯತ್ನ ನಡೆಸಲು ಮುಂದಾಗಿದ್ದಾಗಿ ತಿಳಿದುಬಂದಿದೆ.
ಜುಲೈ 16ರಂದು ಭಾರತೀಯ ನರ್ಸ್ಗೆ ಮರಣದಂಡನೆ ವಿಧಿಸುವುದಾಗಿ ಯೆಮೆನ್ ಜೈಲು ಅಧಿಕಾರಿಗಳು ಪ್ರಕಟಿಸಿದ್ದಾರೆ. ಭಾರತ ಸರ್ಕಾರವೂ ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸಿತ್ತು. ಆದರೆ, ಮೃತ ವ್ಯಕ್ತಿಯ ಕುಟುಂಬಸ್ಥರು ‘ಬ್ಲಡ್ ಮನಿ’ (ಪರಿಹಾರ ಹಣ) ಪಡೆದುಕೊಳ್ಳಲು ನಿರಾಕರಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಗಲ್ಲು ಶಿಕ್ಷೆ ವಿಧಿಸುವ ಒಂದು ದಿನ ಮುಂಚೆ ಅಬೂಬಕರ್ ಅವರು ಯೆಮೆನ್ನ ಸೂಫಿ ನಾಯಕ ಶೇಖ್ ಹಬೀಬ್ ಉಮರ್ ಬಿನ್ ಹಫೀಜ್ ಅವರ ಪ್ರತಿನಿಧಿಗಳು ಮತ್ತು ನರ್ಸ್ ನಿಮಿಷಾ ಪ್ರಿಯಾ ಅವರಿಂದ ಹತ್ಯೆಗೀಡಾದ ಅಲ್ಲಿನ ಪ್ರಜೆ ತಲಾಲ್ ಅಬ್ದೋ ಮಹ್ದಿ ಅವರ ಕುಟುಂಬದ ಜೊತೆ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಇಂದು (ಜುಲೈ 15) ಯೆಮೆನ್ನಲ್ಲಿ ಸಭೆ ನಡೆಯಲಿದೆ. ಬಳಿಕ ಅಧಿಕಾರಿಗಳ ಜೊತೆಗೂ ಚರ್ಚೆಯಾಗಲಿದೆ ಎಂದು ತಿಳಿದುಬಂದಿದೆ.
ನಿಮಿಷಾ ಅವರಿಂದ ಕೊಲೆಯಾಗಿದ್ದಾರೆ ಎಂದು ಹೇಳಲಾದ ಯೆಮೆನ್ ಪ್ರಜೆಯ ಕುಟುಂಬಸ್ಥರನ್ನು ಮನವೊಲಿಸುವುದರ ಜೊತೆಗೆ, ಜುಲೈ 16ರಂದು ನಿಗದಿಯಾಗಿರುವ ಮರಣದಂಡನೆಯನ್ನು ಮುಂದೂಡಲು ತುರ್ತು ಪ್ರಯತ್ನಗಳನ್ನು ಪ್ರಾರಂಭಿಸಲು ಅಟಾರ್ನಿ ಜನರಲ್ ಅವರನ್ನೂ ಅಬೂಬಕರ್ ಭೇಟಿ ಮಾಡುವ ಸಾಧ್ಯತೆ ಇದೆ.