ನಾನು ಮೊದಲು ಸಣ್ಣದಾಗಿಯೇ ಇದ್ದೆ. ಈಗ ಸ್ವಲ್ಪ ದಪ್ಪಗಾಗಿರುವೆ ಅದಕ್ಕೆ ನನಗೆ ಭೀಮ ಕುಂಭಕರ್ಣ, ಯಮನ ಪಾತ್ರಗಳು ಮೀಸಲು ಎಂದು ಮೀಸೆ ತಿರುವಿದರು ವೆಂಕಟೇಗೌಡರು. ಪಟ್ನದಲ್ಲಿ ನಾಟಕ ಮಾಡಿಕೊಂಡಿದ್ದವರನ್ನು ಪಟ್ಟಣಕ್ಕೆ ಕರೆತಂದವರು ಹಾರ‍್ಮೋನಿಯಂ ಮಾಸ್ಟರ್ ಎ.ಸಿ.ರಾಜು. ನಿಮ್ಮ ಪಟ್ನ ಎಲ್ಲಿದೆ ರಾಜೇಗೌಡ್ರೇ (ಇವರ ಇನ್ನೊಂದು ಹೆಸರು) ಎಂದರೆ ಸಾರ್, ನಮ್ಮೂರು ಆಲೂರುಗೆ ೫ ಕಿ.ಮೀ.ದೂರದಲ್ಲಿದೆ. ಕದಾಳು ಗ್ರಾಮ ಪಂಚಾಯ್ತಿಗೆ ಸೇರಿದೆ. ೬೫ ಮನೆ ೪೦೦ ಜನಸಂಖ್ಯೆ ಇದೆ ಎಂದರು. ದಿ. ೧-೧-೧೯೬೪ರಲ್ಲಿ ಜನಿಸಿದ ಇವರ ತಂದೆಯ ಹೆಸರು ವೆಂಕಟೇ ಗೌಡರೇ. ತಾಯಿ ಜಯಮ್ಮ. ಊರಲ್ಲಿ ಇರುವ ಹಂಚಿನ ಮನೆಯ ರಾಮಮಂದಿರ ನಮಗೆ ಆಭ್ಯಾಸದ ಮನೆ. ಊರಲ್ಲಿ ರಾಮನ ದೇವಸ್ಥಾನ ಕಟ್ಟುವ ನಮ್ಮ ಊರವರ ಆಸೆ ಇನ್ನೂ ಕೈಗೂಡಿಲ್ಲ ಎಂದರು. ೫೦ ವರ್ಷಗಳಿಂದ ನಮ್ಮೂರಲ್ಲಿ ನಾಟಕ ಕಲಿಯುತ್ತಿದ್ದಾರೆ ಎನ್ನುವ ಇವರು ೯ನೇ ಕ್ಲಾಸ್ ಓದುವಾಗಲೇ ಭೀಷ್ಮನ ಪಾತ್ರದಲ್ಲಿ ರಂಗಪ್ರವೇಶಿಸಿ ಮುಂದೆಯೂ ರಂಗದಲ್ಲಿ ಮುಂದುವರಿಯುವ ಶಪಥ ಮಾಡಿದರು. ಕಿರಗಡಲು ಸಣ್ಣಪ್ಪನವರ ನಿರ್ದೇಶನದಲ್ಲಿ ಊರಲ್ಲಿ ನಡೆದ ರಾಮಾಯಣದಲ್ಲಿ ಕೈಕೆ ಪಾತ್ರಕ್ಕೆ ಬಣ್ಣ ಹಚ್ಚಿದಾಗ ಹತ್ತನೇ ಕ್ಲಾಸ್. ಅರಕಲಗೊಡು ತಿಮ್ಮಾಚಾರ್ ನಿರ್ದೇಶನದಲ್ಲಿ ಕುರುಕ್ಷೇತ್ರ ನಾಟಕದಲ್ಲಿ ಅಭಿಮನ್ಯು ಪಾತ್ರ ಮಾಡಿದಾಗ ವಯಸ್ಸು ಇಪ್ಪತ್ತು. ತಮ್ಮ ನೇತೃತ್ವದಲ್ಲಿ ೩ ವರ್ಷ ನಾಟಕ ಆಡಿಸಿದ್ದಾಗಿ ಹೇಳಿದರು. ರಾಜ ಸತ್ಯವ್ರತ ನಾಟಕದಲ್ಲಿ ೩ ಬಾರಿ ಸತ್ಯವ್ರತ, ಶನಿದೇವರು, ಯಮನಾಗಿ ನಟಿಸಿದ್ದಾರೆ. ಮಗ್ಗೆ, ಮೇರ‍್ವೆಯಲ್ಲಿ ೩ ಬೈರಾಪುರದಲ್ಲಿ ೪ ಬಾರಿ ಭೀಮನ ಪಾತ್ರ ನಿರ್ವಹಿಸಿದ್ದಾರೆ. ೨೪ ಹಳ್ಳಿಗಳು ಸೇರಿ ನಡೆಯುವ ಬೆಟ್ಟದಳ್ಳಿ ರಂಗನಾಥಸ್ವಾಮಿಬೆಟ್ಟದ ಜಾತ್ರೆಯಲ್ಲಿ ೨ ಬಾರಿ ನಟಿಸಿದ್ದಾರೆ. ಹಳ್ಳಿಯ ನಟರನ್ನು ಸಿಟಿಯಲ್ಲಿ ಮೆರೆಸಿದ ಎ.ಸಿ.ರಾಜು ನಿರ್ದೇಶನದಲ್ಲಿ ೧೫ ಬಾರಿ ಭೀಮನ ಪಾತ್ರದಲ್ಲಿ ಹಾಸನ, ಚಾಮರಾಜನಗರ, ಮೈಸೂರು, ಮಂಡ್ಯ ಕಡೆ ಹೋಗಿ ಪ್ರತಿಭೆ ತೋರಿದ್ದಾರೆ. ಹಾಸನ ಶ್ರೀ ಶಾರದ ಕಲಾಸಂಘದ ಅಧ್ಯಕ್ಷರು ಹೆಚ್.ಜಿ. ಗಂಗಾಧರ್ ನನಗೆ ಹೆಚ್ಚಿನ ಅವಕಾಶ ಕೊಟ್ಟಿದ್ದಾರೆ ಎಂದರು. ದಬ್ಬೆಘಟ್ಟ ಮಂಜುನಾಥ್ ನಿರ್ದೇಶನದಲ್ಲಿ ೫ ಬಾರಿ ಭೀಮನಾಗಿ ಗದೆ ತಿರುಗಿಸಿದ್ದಾರೆ. ಸಾರ್, ಈ ನಟಿಯರು ಇದ್ದರಲ್ಲಾ ಒಂದು ನಾಟಕದಲ್ಲಿ ಮೂರ‍್ನಾಲ್ಕು ಪಾತ್ರಗಳಿಗೆ ಒಪ್ಪಿಕೊಂಡು, ಭೀಮನ ಕೈಗೆ ಹಗ್ಗ ಕಟ್ಟುವ ಸನ್ನಿವೇಶದಲ್ಲಿ ಅವರು ಡ್ರೆಸ್ ಬದಲಾಯಿಸಿ ದ್ರೌಪದಿ ವೇಷದಲ್ಲಿ ಬರುವುದಕ್ಕೆ ತಡಮಾಡಿ ಅಥವಾ ಬಾರದೇ ಎಷ್ಟು ಕಷ್ಟ ಕೊಟ್ಟಿದ್ದಾರೆ ಎಂದರೆ..! ಅವರ ಮನದಲ್ಲಿ ಸಿಟ್ಟಿದ್ದರೂ ತಾಳ್ಮೆಯಿಂದಲೇ ಒಪ್ಪಿಸಿದರು. ಸೀಗೆನಾಡು ಹೆಚ್.ಎಲ್. ಪಾಲಾಕ್ಷಾಚಾರ್, ಹಾಸನದ ಹೇಮಂತಚಾರ್, ಸಚಿನ್ ಚನ್ನರಾಯಪಟ್ಟಣ, ಬೆಳ್ಳೂರು ಕ್ರಾಸ್ ಅಶ್ವಥ್ ಇವರ ನಿರ್ದೇಶನದಲ್ಲಿ ಕುಂಭಕರ್ಣನಾಗಿ ರಾವಣ ದರ್ಬಾರ್ ದೃಶ್ಯದಲ್ಲಿ ಮೆರೆದಿದ್ದಾರೆ. ಬೆಂಗಳೂರು ಪಿಣ್ಯದಾಸರಹಳ್ಳಿ ಮಹೇಶ್ವರಿ ದೇವಸ್ಥಾನ ಜಾತ್ರೆಯಲ್ಲಿ ಕಲ್ಲೂರು ಶ್ರೀನಿವಾಸ ನಿರ್ದೇಶನದಲ್ಲಿ ನಟಿಸಿದನ್ನೂ ಸ್ಮರಿಸಿದರು. ಊರಲ್ಲಿ ವ್ಯವಸಾಯ ಜೊತೆಗೆ ಒಂದು ಆಟೋ ಇಟ್ಟಿದ್ದಾರೆ. ನಾಟಕ ನೋಡಲು ಪ್ರಾಕ್ಟಿಸ್ ಮಾಡಲು ಇದರಲ್ಲೇ ಬರುವ ಇವರಿಗೆ ನಾಟಕ ಎಂದರೆ ಪಂಚಪ್ರಾಣ.
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.